ADVERTISEMENT

ಪ್ರಧಾನಿ ಮೋದಿ ಕಾರ್ಯಕ್ರಮಕ್ಕೆ ಕಪ್ಪು ಉಡುಪು ತೊಡುವಂತಿಲ್ಲ: ದೆಹಲಿ ವಿವಿ ಸೂಚನೆ

ಪಿಟಿಐ
Published 30 ಜೂನ್ 2023, 6:42 IST
Last Updated 30 ಜೂನ್ 2023, 6:42 IST
ಪಿಟಿಐ ಚಿತ್ರ
ಪಿಟಿಐ ಚಿತ್ರ   

ನವದೆಹಲಿ: ದೆಹಲಿ ವಿಶ್ವವಿದ್ಯಾಲಯದ ಶತಮಾನೋತ್ಸವ ಸಮಾರಂಭದ ಸಮಾರೋಪದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದು, ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳು, ಸಿಬ್ಬಂದಿ ಕಪ್ಪು ಬಟ್ಟೆ ತೊಡದಂತೆ ವಿವಿ ಸುತ್ತೋಲೆ ಹೊರಡಿಸಿದೆ.

ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಶುಕ್ರವಾರ ಮೆಟ್ರೊ ಮೂಲಕ ಪ್ರಯಾಣಿಸಿದರು.

ಪ್ರಯಾಣದಲ್ಲಿ ಸಹ ಪ್ರಯಾಣಿಕರೊಂದಿಗೆ ಅವರು ಸಮಾಲೋಚನೆ ನಡೆಸಿದರು. ಬಹಳಷ್ಟು ಯುವಕ ಹಾಗೂ ಯುವತಿಯರು ಈ ಪ್ರಯಾಣದಲ್ಲಿ ಪ್ರಧಾನಿಯೊಂದಿಗೆ ಹಲವು ವಿಷಯಗಳ ಕುರಿತು ಚರ್ಚಿಸಿದರು.

ADVERTISEMENT

ದೆಹಲಿ ವಿಶ್ವವಿದ್ಯಾಲಯ ಭೇಟಿ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯದ ಸುತ್ತ ಸುಮಾರು ಮೂರು ಹಂತಗಳಲ್ಲಿ ಒಂದು ಸಾವಿರಕ್ಕೂ ಅಧಿಕ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.

‘ವಿವಿ ಕ್ಯಾಂಪಸ್‌ನಲ್ಲಿ ನಿರ್ಮಾಣಗೊಳ್ಳಲಿರುವ ತಂತ್ರಜ್ಞಾನ ಪರಿಣಿತರ ಕಟ್ಟಡ, ಕಂಪ್ಯೂಟರ್ ಕೇಂದ್ರ ಹಾಗೂ ಆಡಳಿತ ಭವನ ಸೇರಿದಂತೆ ಮೂರು ಕಟ್ಟಡಗಳಿಗೆ ಪ್ರಧಾನಮಂತ್ರಿ ಅಡಿಗಲ್ಲು ಹಾಕಲಿದ್ದಾರೆ. ಜತೆಗೆ ಕಾಫಿಟೇಬಲ್ ಪುಸ್ತಕವನ್ನು ಬಿಡುಗಡೆ ಮಾಡಲಿದ್ದಾರೆ. ಸಮಾರಂಭದಲ್ಲಿ ಪಾಲ್ಗೊಳ್ಳುವವರನ್ನು ಮೂರು ಹಂತಗಳಲ್ಲಿ ಭದ್ರತಾ ಸಿಬ್ಬಂದಿ ತಪಾಸಣೆ ಮಾಡಲಿದ್ದಾರೆ’ ಎಂದು ಅಧಿಕಾರಿಗಳು ತಿಳಿಸಿದರು.

ಕಪ್ಪು ಬಟ್ಟೆ ತೊಡುವಂತಿಲ್ಲ. ಎಲ್ಲರೂ ಕಡ್ಡಾಯವಾಗಿ ಹಾಜರಿರಬೇಕು. ಬೆಳಿಗ್ಗೆ 10ರಿಂದ ಮಧ್ಯಾಹ್ನ 12ರವರೆಗೆ ತರಗತಿಗಳನ್ನು ನಡೆಸುವಂತಿಲ್ಲ ಎಂದು ವಿಶ್ವವಿದ್ಯಾಲಯ ತನ್ನ ವಿದ್ಯಾರ್ಥಿಗಳಿಗೆ ಸೂಚಿಸಿದೆ. ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್ ಅವರು ಅತಿಥಿಯಾಗಿ ಪಾಲ್ಗೊಳ್ಳುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.