ನವದೆಹಲಿ (ಪಿಟಿಐ): ‘ವಿಶೇಷ ವರ್ಗ ಸ್ಥಾನಮಾನ ನೀಡಲು ಬಿಹಾರವನ್ನು ಪರಿಗಣಿಸಿಲ್ಲ’ ಎಂದು ಅಂತರ ಸಚಿವಾಲಯಗಳ ಸಮಿತಿಯೊಂದು (ಐಎಂಜಿ) 2012ರಲ್ಲಿ ನೀಡಿದ್ದ ವರದಿ ಆಧರಿಸಿ ಕೇಂದ್ರ ಸರ್ಕಾರವು ಲೋಕಸಭೆಗೆ ಸೋಮವಾರ ಮಾಹಿತಿ ನೀಡಿತು.
ಕೇಂದ್ರ ಹಣಕಾಸು ರಾಜ್ಯಖಾತೆ ಸಚಿವ ಪಂಕಜ್ ಚೌಧರಿ ಅವರು ಮುಂಗಾರು ಅಧಿವೇಶನದ ಮೊದಲ ದಿನ ಈ ಕುರಿತು ಲಿಖಿತ ಉತ್ತರ ನೀಡಿದರು.
ರಾಷ್ಟ್ರೀಯ ಅಭಿವೃದ್ಧಿ ಮಂಡಳಿಯು (ಎನ್‌ಡಿಸಿ) ವಿಶೇಷ ಪರಿಗಣನೆಯ ಅಗತ್ಯವಿದ್ದ ಕೆಲ ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನ ನೀಡಿತ್ತು. ಪರ್ವತ ಪ್ರದೇಶದಿಂದ ಕೂಡಿರುವ ರಾಜ್ಯಗಳು, ವಿರಳ ಜನಸಂಖ್ಯೆ, ಒಟ್ಟು ಜನಸಂಖ್ಯೆಯಲ್ಲಿ ಆದಿವಾಸಿ ಸಮುದಾಯ ಮಹತ್ವದ ಪಾಲು, ನೆರೆ ರಾಷ್ಟ್ರಗಳ ಜೊತೆ ಗಡಿ ಹಂಚಿಕೊಂಡಿರುವ ಮತ್ತು ಆರ್ಥಿಕವಾಗಿ ಹಾಗೂ ಮೂಲಸೌಕರ್ಯದಲ್ಲಿ ಹಿಂದುಳಿದ ರಾಜ್ಯಗಳಿಗೆ ವಿಶೇಷ ವರ್ಗ ಸ್ಥಾನಮಾನವನ್ನು ಎನ್‌ಡಿಸಿ ನೀಡಿತ್ತು.
ಎನ್‌ಡಿಸಿಯ ಮಾನದಂಡಗಳ ಪ್ರಕಾರ ಬಿಹಾರಕ್ಕೆ ಈ ಸ್ಥಾನಮಾನವನ್ನು ನೀಡಲಾಗಿಲ್ಲ ಎಂದು ಪಂಕಜ್ ಚೌಧರಿ ವಿವರಿಸಿದರು.
ಭಾನುವಾರ ನಡೆದ ಸರ್ವಪಕ್ಷಗಳ ಸಭೆಯಲ್ಲಿ ಜೆಡಿಯು ನಾಯಕ ಸಂಜಯ್ ಕುಮಾರ್ ಝಾ ಅವರು ಬಿಹಾರಕ್ಕೆ ವಿಶೇಷ ವರ್ಗ ಸ್ಥಾನಮಾನ ನೀಡುವಂತೆ ಪ್ರಸ್ತಾಪಿಸಿದ್ದರು. ಎನ್‌ಡಿಎಯ ಮತ್ತೊಂದು ಮಿತ್ರಪಕ್ಷ ಲೋಕ ಜನಶಕ್ತಿ ಪಕ್ಷ ಮತ್ತು ವಿಪಕ್ಷ ಆರ್‌ಜೆಡಿ ಕೂಡಾ ಇದೇ ಇಂಗಿತವನ್ನು ವ್ಯಕ್ತಪಡಿಸಿದ್ದವು.
ಒಂದು ವೇಳೆ ರಾಜ್ಯಕ್ಕೆ ವಿಶೇಷ ವರ್ಗ ಸ್ಥಾನಮಾನ ನೀಡಲು ಸಾಧ್ಯವಾಗದಿದ್ದರೆ, ವಿಶೇಷ ಆರ್ಥಿಕ ಪ್ಯಾಕೇಜನ್ನಾದರೂ ನೀಡುವಂತೆ ಕೇಂದ್ರ ಸರ್ಕಾರಕ್ಕೆ ಜೆಡಿಯು ಈಗಾಗಲೇ ಮನವಿ ಮಾಡಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಜೆಡಿಯು ಸಂಸದ ರಾಮ್‌ಪ್ರೀತ್ ಮಂಡಲ್, ‘ವಿಶೇಷ ವರ್ಗ ಸ್ಥಾನಮಾನಕ್ಕಾಗಿ ನಾವು 2013ರಿಂದಲೂ ಬೇಡಿಕೆ ಇರಿಸಿದ್ದೇವೆ. ನಮ್ಮ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರೂ ಇದಕ್ಕಾಗಿ ಶ್ರಮವಹಿಸುತ್ತಿದ್ದಾರೆ. ಈ ಕುರಿತು ಅವರ ನಿರ್ಧಾರಕ್ಕೆ ನಾವು ಬದ್ಧರಾಗಿರುತ್ತೇವೆ’ ಎಂದು ಹೇಳಿದ್ದಾರೆ.
‘ಬಿಹಾರದ ಹಿತಾಸಕ್ತಿ ಜೊತೆ ನಿತೀಶ್ ರಾಜಿ’
ಪಟ್ನಾ (ಪಿಟಿಐ): ‘ಅಧಿಕಾರಕ್ಕೋಸ್ಕರ ಬಿಹಾರ ಜನರ ಆಶೋತ್ತರಗಳು ಮತ್ತು ನಂಬಿಕೆಯ ಜೊತೆ ರಾಜ್ಯದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ರಾಜಿ ಮಾಡಿಕೊಂಡಂತಿದೆ’ ಎಂದು ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಅವರು ಸೋಮವಾರ ಹೇಳಿದರು. ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವಂತೆ ರಾಜ್ಯ ಸರ್ಕಾರವು ಸಲ್ಲಿಸಿದ್ದ ಬೇಡಿಕೆಯನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ‘ಬಿಹಾರಕ್ಕೆ ವಿಶೇಷ ಸ್ಥಾನಮಾನ ಕೊಡಿಸುವ ಭರವಸೆಯನ್ನು ನಿತೀಶ್ ನೀಡಿದ್ದರು. ಅದನ್ನು ಈಡೇರಿಸುವಲ್ಲಿ ವಿಫಲರಾದ ಕಾರಣ ಅವರು ರಾಜೀನಾಮೆ ನೀಡಬೇಕು’ ಎಂದು ಆಗ್ರಹಿಸಿದರು. ಮುಂಗಾರು ಅಧಿವೇಶನದ ಮೊದಲ ದಿನ ಈ ಕುರಿತು ಲೋಕಸಭೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಹಣಕಾಸು ರಾಜ್ಯ ಖಾತೆ ಸಚಿವ ಪಂಕಜ್ ಚೌಧರಿ ಅವರು ‘ಬಿಹಾರಕ್ಕೆ ವಿಶೇಷ ಸ್ಥಾನಮಾನ ನೀಡುವು ಒತ್ತಾಯವು ನ್ಯಾಯಸಮ್ಮತವಲ್ಲ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.