ADVERTISEMENT

Explainer: ವಿಶ್ವಾಸಮತ ಸೋತು ಅಧಿಕಾರದಿಂದ ಕೆಳಗಿಳಿದ ಪ್ರಧಾನಿಗಳಿವರು...

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 26 ಜುಲೈ 2023, 14:15 IST
Last Updated 26 ಜುಲೈ 2023, 14:15 IST
   

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್‌ನ ಸಂಸದ ಗೌರವ್‌ ಗೊಗೊಯ್‌ ಮಂಡಿಸಿದ್ದ ಅವಿಶ್ವಾಸ ನಿರ್ಣಯವನ್ನು ಲೋಕಸಭೆ ಸ್ಪೀಕರ್‌ ಓಂ ಬಿರ್ಲಾ ಅವರು ಅಂಗೀಕರಿಸಿದ್ದಾರೆ.

ನಿಯಮಗಳ ಪ್ರಕಾರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್‌ಗೆ 50 ಸಂಸದರ ಸಹಿ ಬೇಕು. ಕಾಂಗ್ರೆಸ್ ಸಂಸದ ನೀಡಿದ್ದ ನೋಟಿಸ್‌ ಕ್ರಮಬದ್ಧವಾಗಿದ್ದರಿಂದ ಸ್ಪೀಕರ್‌ ಅವರು ನೋಟಿಸ್‌ ಅನ್ನು ಅಂಗೀಕರಿಸಿದ್ದಾರೆ.

ಮಣಿಪುರ ಗಲಭೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಸಂಸತ್ತಿನಲ್ಲಿ ಪ್ರತಿಕ್ರಿಯೆ ನೀಡಬೇಕು ಎಂದು ವಿರೋಧ ಪಕ್ಷಗಳು ಒತ್ತಾಯಿಸಿವೆ. ಆದರೆ ಈವರೆಗೂ ಪ್ರಧಾನಿಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಅವಿಶ್ವಾಸ ನಿರ್ಣಯ ಮಂಡಿಸಿ ಪ್ರಧಾನಿಯಿಂದ ಪ್ರತಿಕ್ರಿಯೆ ಪಡೆದುಕೊಳ್ಳಬೇಕು ಎನ್ನುವುದು ವಿಪಕ್ಷಗಳ ಯೋಜನೆ.

ADVERTISEMENT

ಸಂಖ್ಯಾಬಲದಲ್ಲಿ ಈ ಅವಿಶ್ವಾಸ ನಿರ್ಣಯ ಮಂಡನೆಗೆ ಸೋಲಾಗುವುದು ನಿಶ್ಚಿತ. ಆದರೆ ಮಣಿಪುರ ಗಲಭೆ ಸಂಬಂಧ ಪ್ರಧಾನಿಯಿಂದ ಹೇಳಿಕೆ ಪಡೆದು ನೈತಿಕವಾಗಿ ಗೆಲ್ಲಬಹುದು ಎನ್ನುವುದು ಪ್ರತಿಪಕ್ಷಗಳ ಲೆಕ್ಕಾಚಾರ.

ಈವರೆಗೂ 27 ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದ್ದು, ಕೇವಲ ಮೂರು ಬಾರಿ ಮಾತ್ರ ಪ್ರತಿಪಕ್ಷಗಳಿಗೆ ಗೆಲುವಾಗಿದೆ. ಇಂದಿರಾ ಗಾಂಧಿ ವಿರುದ್ಧ ಅತೀ ಹೆಚ್ಚು ಅಂದರೆ 15 ಬಾರಿ ಅವಿಶ್ವಾಸ ನಿರ್ಣಯ ಮಂಡಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ಗೊತ್ತುವಳಿ ಮಂಡನೆಯಾಗುತ್ತಿರುವುದು ಇದು ಎರಡನೇ ಬಾರಿ. ಈ ಹಿಂದೆ 2018ರಲ್ಲಿ ಮೋದಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ ಮಾಡಲಾಗಿತ್ತು. ಆದರೆ ಅದರಲ್ಲಿ ಪ್ರಧಾನಿ ಮೋದಿ ಗೆದ್ದಿದ್ದರು.|

ಅವಿಶ್ವಾಸ ನಿರ್ಣಯ ಸೋತ ಪ್ರಧಾನ ಮಂತ್ರಿಗಳು

1. ವಿಶ್ವನಾಥ ಪ್ರತಾಪ್ ಸಿಂಗ್‌
ಜನತಾ ದಳದಿಂದ ಪ್ರಧಾನಿಯಾಗಿದ್ದ ವಿಶ್ವನಾಥ್‌ ಪ್ರತಾಪ್‌ ಸಿಂಗ್‌ (ವಿ.ಪಿ ಸಿಂಗ್‌) ಅವರು 1989 ರಿಂದ 1990ರ ವರೆಗೆ ಅಧಿಕಾರದಲ್ಲಿದ್ದರು. ನ್ಯಾಷನಲ್‌ ಫ್ರಂಟ್‌ ಎನ್ನುವ ಹಲವು ಪಕ್ಷಗಳ ಒಕ್ಕೂಟದಿಂದ ಪ್ರಧಾನಿಯಾಗಿದ್ದರು. ಬಿಜೆಪಿ ಕೂಡ ಅವರಿಗೆ ಬೆಂಬಲ ನೀಡಿತ್ತು. ರಾಮ ಮಂದಿರ ವಿವಾದ ಸಂಬಂಧ ಅವರ ಸರ್ಕಾರಕ್ಕೆ ನೀಡಿದ ಬೆಂಬಲವನ್ನು ಬಿಜೆಪಿ ಹಿಂಪಡೆಯಿತು. ವಿಶ್ವಾಸಮತ ಸಾಬೀತು ಪಡಿಸಲು ವಿ.ಪಿ ಸಿಂಗ್ ವಿಫಲರಾದರು. 142-346 ಮತಗಳಿಂದ ಸೋಲು ಅನುಭವಿಸಿ ಅಧಿಕಾರ ಕಳೆದುಕೊಂಡರು.
2. ಎಚ್‌.ಡಿ ದೇವೇಗೌಡ
ಜನತಾದಳದಿಂದ ಪ್ರಧಾನ ಮಂತ್ರಿಯಾಗಿದ್ದ ಕರ್ನಾಟಕ ಎಚ್‌.ಡಿ ದೇವೇಗೌಡರು ಕೂಡ ವಿಶ್ವಾಸಮತ ಸಾಬೀತು ಪಡಿಸಲಾಗದೆಯೇ ಪ್ರಧಾನಿ ಹುದ್ದೆಯಿಂದ ನಿರ್ಗಮಿಸಬೇಕಾಗಿ ಬಂತು. 1996 ರಲ್ಲಿ ಕಾಂಗ್ರೆಸ್‌ ಬೆಂಬಲದಿಂದ ‘ಸಂಯುಕ್ತ ರಂಗ‘ ಸರ್ಕಾರದ ಪ್ರಧಾನಮಂತ್ರಿಯಾದರು. 11 ತಿಂಗಳಿನಲ್ಲಿ ನೀಡಿದ್ದ ಬೆಂಬಲವನ್ನು ಕಾಂಗ್ರೆಸ್‌ ಹಿಂಪಡೆಯಿತು. 1997 ಏಪ್ರಿಲ್‌ 11 ರಂದು ದೇವೇಗೌಡರ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತು. ಸರ್ಕಾರದ ಪರವಾಗಿ ಕೇವಲ 158 ಮತಗಳಷ್ಟೇ ಬಿದ್ದವು. ದೇವೇಗೌಡರು ಪ್ರಧಾನಮಂತ್ರಿ ಹುದ್ದೆಯಿಂದ ಕೆಳಗಿಳಿದರು. ಈವರೆಗೂ ಕನ್ನಡಿಗರೊಬ್ಬರು ದೇಶದ ಪ್ರಧಾನಮಂತ್ರಿಯಾಗಿದ್ದು ಅದೇ ಮೊದಲು ಹಾಗೂ ಕೊನೆ.
3. ಅಟಲ್‌ ಬಿಹಾರಿ ವಾಜಪೇಯಿ
ಬಿಜೆಪಿಯ ಧುರೀಣ ಆಟಲ್‌ ಬಿಹಾರಿ ವಾಜಪೇಯಿ ಅವರ ವಿರುದ್ಧ ಎರಡು ಬಾರಿ ಅವಿಶ್ವಾಸ ನಿರ್ಣಯ ಮಂಡನೆಯಾಗಿತ್ತು. 1999ರಲ್ಲಿ ಜಯಲಲಿತಾ ನೇತೃತ್ವದ ಎಐಎಡಿಎಂಕೆ ವಾಜಪೇಯಿ ಸರ್ಕಾರಕ್ಕೆ ನೀಡಿದ್ದ ಬೆಂಬಲ ವಾಪಸ್‌ ಪಡೆದ ಪರಿಣಾಮ ಅವಿಶ್ವಾಸ ಎದುರಿಸಬೇಕಾಯಿತು. ಕೇವಲ 1 ಮತದಿಂದ ಸರ್ಕಾರಕ್ಕೆ ಸೋಲಾಯಿತು. 2003ರಲ್ಲಿ ಮತ್ತೆ ವಾಜಪೇಯಿ ಸರ್ಕಾರದ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಯಿತಾದರೂ, ಭಾರೀ ಬಹುಮತದಿಂದ ಗೆದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.