ಚನ್ನೈ: ‘ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿಯು(ಟಿಎನ್‌ಇಬಿ) ಅದಾನಿ ಸಮೂಹದೊಂದಿಗೆ ಯಾವುದೇ ವಾಣಿಜ್ಯ ವ್ಯವಹಾರವನ್ನು ಹೊಂದಿಲ್ಲ’ ಎಂದು ಇಂಧನ ಸಚಿವ ವಿ.ಸೆಂಥಿಲ್ ಬಾಲಾಜಿ ಸ್ಪಷ್ಟನೆ ನೀಡಿದ್ದಾರೆ.
ಸೌರ ವಿದ್ಯುತ್ ಗುತ್ತಿಗೆಗೆ ಸಂಬಂಧಿಸಿದಂತೆ ಶತಕೋಟಿ ಡಾಲರ್ ಲಂಚ ಮತ್ತು ವಂಚನೆ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ವಿರುದ್ಧ ಅಮೆರಿಕ ನ್ಯಾಯಾಲಯ ಗುರುವಾರ ಬಂಧನ ವಾರೆಂಟ್ ಹೊರಡಿಸಿದೆ. ಅಲ್ಲದೇ ತಮ್ಮ ವ್ಯವಹಾರಗಳಿಗೆ ಅನುಕೂಲವಾಗುವಂತೆ ಭಾರತ ಸರ್ಕಾರದ ಅಧಿಕಾರಿಗಳಿಗೆ ಲಂಚ ನೀಡಿದ್ದಾರೆ ಎಂಬ ಆರೋಪವೂ ಇದೆ.
ಇದರ ಬೆನ್ನಲ್ಲೇ ಅದಾನಿ ಸಮೂಹದೊಂದಿಗೆ ತಮಿಳುನಾಡು ವಿದ್ಯುಚ್ಛಕ್ತಿ ಮಂಡಳಿ(ಟಿಎನ್‌ಇಬಿ) ಒಪ್ಪಂದಕ್ಕೆ ಸಹಿ ಹಾಕಿದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಬಗ್ಗೆ ಪಶ್ಚಿಮ ತಮಿಳುನಾಡಿನ ಕರೂರ್‌ನಲ್ಲಿ ಸುದ್ದಿಗಾರರೊಂದಿಗೆ ಸೆಂಥಿಲ್ ಮಾತನಾಡಿದ್ದಾರೆ.
‘ಟಿಎನ್‌ಇಬಿಯು ಅದಾನಿ ಸಮೂಹದೊಂದಿಗೆ ಯಾವುದೇ ವಾಣಿಜ್ಯ ಸಂಬಂಧವನ್ನು ಹೊಂದಿಲ್ಲ. ಸಾಮಾಜಿಕ ಮಾಧ್ಯಮಗಳಲ್ಲಿ ಆಧಾರರಹಿತ ಆರೋಪಗಳು ಹರಿದಾಡುತ್ತಿವೆ. ಅಂತಹ ಆರೋಪಗಳನ್ನು ನಾನು ನಿರಾಕರಿಸುತ್ತೇನೆ’ ಎಂದರು.
‘ಪ್ರತಿ ಯೂನಿಟ್‌ಗೆ ₹2.61ರಂತೆ ಸೌರಶಕ್ತಿಯನ್ನು ಖರೀದಿಸಲು ಕೇಂದ್ರ ಸರ್ಕಾರದ ಸಾರ್ವಜನಿಕ ವಲಯದ ಉದ್ಯಮವಾದ ಭಾರತೀಯ ಸೌರಶಕ್ತಿ ನಿಗಮದ(ಸೆಕಿ–SECI) ಜತೆ ಟಿಎನ್‌ಇಬಿಯು ಒಪ್ಪಂದ ಮಾಡಿಕೊಂಡಿದೆ. ಟಿಎನ್ಇಬಿಯು ಸೆಕಿಯೊಂದಿಗೆ 25 ವರ್ಷಗಳ ಒಪ್ಪಂದಕ್ಕೆ ಸಹಿ ಹಾಕಿದೆ’ ಎಂದು ಹೇಳಿದರು.
‘ಹಿಂದಿನ ಎಐಎಡಿಎಂಕೆ ಸರ್ಕಾರವು ವಿದ್ಯುತ್ ಖರೀದಿಸಲು ಪ್ರತಿ ಯೂನಿಟ್‌ಗೆ ಹೆಚ್ಚಿನ ಬೆಲೆ ತೆರುತಿತ್ತು. ನಾವು ಸೌರಶಕ್ತಿಯನ್ನು ಅತ್ಯಂತ ಕಡಿಮೆ ಬೆಲೆಗೆ ಖರೀದಿಸಿದ್ದೇವೆ. ನಮ್ಮ ಒಪ್ಪಂದವಿರುವುದು ಸೆಕಿಯೊಂದಿಗೆ ಮಾತ್ರ. ಅದು(ಸೆಕಿ) ಅದಾನಿ ಸಮೂಹದಂತಹ ಖಾಸಗಿ ಕಂಪನಿಗಳಿಂದ ಸೌರಶಕ್ತಿಯನ್ನು ಖರೀದಿಸಿ ನಮಗೆ ಮಾರಾಟ ಮಾಡುತ್ತದೆ. ಅದಾನಿ ಸಮೂಹದೊಂದಿಗೆ ನಮಗೆ ಯಾವುದೇ ನೇರ ಸಂಪರ್ಕವಿಲ್ಲ’ ಎಂದು ಹೇಳಿದರು.
ಡಿಎಂಕೆ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಅದಾನಿ ಸಮೂಹದೊಂದಿಗೆ ಯಾವುದೇ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ತಿಳಿಸಿದರು.
ಅದಾನಿ ಸಮೂಹದ ಮೇಲಿನ ಆರೋಪವೇನು?
ಭಾರತದಲ್ಲಿ ಬೃಹತ್ ಸೌರ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗಾಗಿ ಮುಂದಿನ 20 ವರ್ಷಗಳಲ್ಲಿ 2 ಶತಕೋಟಿ ಅಮೆರಿಕನ್ ಡಾಲರ್ ಹೂಡಿಕೆ ಆಕರ್ಷಿಸಲು ಭಾರತದ ಸರ್ಕಾರಿ ಅಧಿಕಾರಿಗಳಿಗೆ ಲಂಚ ನೀಡಿದ ಹಾಗೂ ಅಮೆರಿಕ ಒಳಗೊಂಡಂತೆ ವಿದೇಶಿ ಹೂಡಿಕೆದಾರರಿಗೆ ತಪ್ಪು ಮಾಹಿತಿ ನೀಡಿದ ಆರೋಪವು ಅದಾನಿ ಸಮೂಹದ ಮೇಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.