ನವದೆಹಲಿ: ರಾಷ್ಟ್ರೀಯ ಜನಸಂಖ್ಯಾ ನೋಂದಣಿಗೆ (ಎನ್‌ಪಿಆರ್) ಯಾವುದೇ ದಾಖಲೆಗಳನ್ನು ಕೇಳುವುದಿಲ್ಲ ಅಥವಾ ಬೆರಳಚ್ಚು ತೆಗೆದುಕೊಳ್ಳುವುದಿಲ್ಲ ಎಂದು ಗೃಹ ಸಚಿವಾಲಯ ಬುಧವಾರ ತಿಳಿಸಿದೆ.
ಎನ್‌ಪಿಆರ್‌ಗಾಗಿ ಪ್ರಶ್ನೋತ್ತರಗಳಿರುವ ಅರ್ಜಿಯನ್ನು ಸಿದ್ಧಪಡಿಸಲಾಗುತ್ತಿದ್ದು, ಶೀಘ್ರವೇ ಅದನ್ನು ಅಂತಿಮಗೊಳಿಸಲಾಗುವುದು ಎಂದು ಸಚಿವಾಲಯದ ಅಧಿಕಾರಿಗಳು ಹೇಳಿದರು. ಆದಾಗ್ಯೂ ಜನಗಣತಿ ಆಯುಕ್ತರು ಮತ್ತು ಪ್ರಧಾನ ನೋಂದಣಾಧಿಕಾರಿ ಕಚೇರಿಯ ವೆಬ್‌ಸೈಟ್‌ನಲ್ಲಿ ಎನ್‌ಪಿಆರ್‌ಗೆ ಬಯೋಮೆಟ್ರಿಕ್ ವಿವರವೂ ಅಗತ್ಯ ಎಂದು ಹೇಳಲಾಗಿದೆ.
‘ದೇಶದ ನಿವಾಸಿಗಳ ಸಮಗ್ರ ಗುರುತಿನ ದತ್ತಾಂಶವನ್ನು ಸಿದ್ಧಪಡಿಸುವುದು ಎನ್‌ಪಿಆರ್ ಜಾರಿಯ ಉದ್ದೇಶವಾಗಿದೆ. ಈ ದತ್ತಾಂಶವು ಭೌಗೋಳಿಕ ಮಾಹಿತಿಯ ಜೊತೆಗೆ ಬಯೋಮೆಟ್ರಿಕ್ ವಿವರವನ್ನು ಹೊಂದಿರುತ್ತದೆ’ ಎಂದು ವೆಬ್‌ಸೈಟ್‌ನಲ್ಲಿ ವಿವರಿಸಲಾಗಿದೆ.
ಏತನ್ಮಧ್ಯೆ, ಪಶ್ಚಿಮ ಬಂಗಾಳ ಮತ್ತು ಕೇರಳದಲ್ಲಿ ರಾಷ್ಟ್ರೀಯ ಪೌರತ್ವ ತಿದ್ದುಪಡಿ ಕಾಯ್ದೆಗೆ ತೀವ್ರ ವಿರೋಧ ವ್ಯಕ್ತವಾಗಿರುವ ಹಿನ್ನಲೆಯಲ್ಲಿ ಎನ್‌ಪಿಆರ್‌ಗೆ ಸಂಬಂಧಿಸಿದ ಕೆಲಸವನ್ನು ಕೆಲ ಸಮಯದವರೆಗೆ ಸ್ಥಗಿತಗೊಳಿಸಲಾಗಿದೆ.
2020ರ ಏಪ್ರಿಲ್ ಮತ್ತು ಸೆಪ್ಟೆಂಬರ್‌ನಲ್ಲಿ ಅಸ್ಸಾಂ ಹೊರತುಪಡಿಸಿ ದೇಶದಾದ್ಯಂತ ಎನ್‌ಪಿಆರ್ ನಡೆಯಲಿದೆ. ಅಸ್ಸಾಂನಲ್ಲಿ ಈಗಾಗಲೇ ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ) ನಡೆದಿರುವುದರಿಂದ ಅಲ್ಲಿ ಎನ್‌ಪಿಆರ್ ಪ್ರಕ್ರಿಯೆಯಿಂದ ಹೊರಗಿಡಲಾಗಿದೆ.
ಎನ್‌ಪಿಆರ್‌ಗೆ ಪ್ರತಿಯೊಬ್ಬರ ಭೌಗೋಳಿಕ ವಿವರವನ್ನು ನೀಡಬೇಕಿದೆ. ಅವುಗಳೆಂದರೆ: ಹೆಸರು, ಮನೆ ಯಜಮಾನರೊಂದಿಗಿನ ಸಂಬಂಧ, ತಂದೆಯ ಹೆಸರು, ತಾಯಿಯ ಹೆಸರು, ಪತಿ/ಪತ್ನಿ ಹೆಸರು (ಮದುವೆಯಾಗಿದ್ದರೆ), ಲಿಂಗ, ಹುಟ್ಟಿದ ದಿನಾಂಕ, ವೈವಾಹಿಕ ಸ್ಥಿತಿ, ಹುಟ್ಟಿದ ಊರು, ರಾಷ್ಟ್ರೀಯತೆ (ಘೋಷಿಸಿಕೊಂಡಿರುವಂತೆ), ವಾಸವಿರುವ ಮನೆ ವಿಳಾಸ, ವಾಸವಿರುವ ಅವಧಿ, ಸ್ವಂತ ಮನೆ ವಿಳಾಸ, ಹುದ್ದೆಯ ವಿವರ, ವಿದ್ಯಾರ್ಹತೆ.
ದೇಶದಾದ್ಯಂತ ಎನ್‌ಪಿಆರ್ ಪ್ರಕ್ರಿಯೆ ನಡೆಸಲು ₹3941 ಕೋಟಿಯನ್ನು ಮೀಸಲಿಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.