ಮುಂಬೈ: ‘ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಿವುಡ್ ನಟ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಅವರು ಅಂತರರಾಷ್ಟ್ರೀಯ ಡ್ರಗ್ಸ್ ಜಾಲದೊಂದಿಗೆ ಸಂಪರ್ಕ ಹೊಂದಿರುವ ಕುರಿತು ಯಾವುದೇ ಪುರಾವೆಗಳಿಲ್ಲ’ ಎಂದು ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಘಟಕ (ಎನ್‌ಸಿಬಿ) ತಿಳಿಸಿರುವುದಾಗಿ ವರದಿಯಾಗಿದೆ.
ಆದರೆ, ಅಧಿಕಾರಿಗಳನ್ನು ಸಂಪರ್ಕಿಸಿದಾಗ ಈ ಬಗ್ಗೆ ಪ್ರತಿಕ್ರಿಯಿಸಲು ಅವರು ನಿರಾಕರಿಸಿದ್ದಾರೆ. ಗೋವಾಕ್ಕೆ ತೆರಳುತ್ತಿದ್ದ ಹಡಗಿನ ಮೇಲೆ ನಡೆಸಿದ ದಾಳಿ ಸಂದರ್ಭದಲ್ಲಿ ಅಕ್ರಮಗಳು ನಡೆದಿರುವುದು ಪತ್ತೆಯಾಗಿದ್ದು ಸತ್ಯ ಎಂದಿದ್ದಾರೆ. ಈ ಪ್ರಕರಣ ಸಂಬಂಧ ಎಸ್‌ಐಟಿ ತನಿಖೆ ಮುಂದುವರಿಸಿದೆ.
2021ರ ಅಕ್ಟೋಬರ್ 2ರಂದು ಆಗಿನ ಮುಂಬೈನ ಎನ್‌ಸಿಬಿ ವಲಯ ಮುಖ್ಯಸ್ಥ ಸಮೀರ್ ವಾಂಖೆಡೆ ನೇತೃತ್ವದ ತಂಡವು ಕ್ರೂಸ್ ಹಡಗಿನ ಮೇಲೆ ದಾಳಿ ನಡೆಸಿತ್ತು.
ಆರ್ಯನ್ ಖಾನ್ ಹಾಗೂ ಇಬ್ಬರು ನೈಜೀರಿಯಾ ಪ್ರಜೆಗಳು ಸೇರಿದಂತೆ 20 ಜನರನ್ನು ಡ್ರಗ್ಸ್ ಸೇವಿಸಿದ ಆರೋಪದ ಮೇಲೆ ಎನ್‌ಸಿಬಿ ಬಂಧಿಸಿತ್ತು. ವಿಚಾರಣೆ ಬಳಿಕ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಅ.28 ರಂದು ಆರ್ಯನ್‌ಗೆ ಜಾಮೀನು ಮಂಜೂರು ಮಾಡಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.