ADVERTISEMENT

ಕಾರ್ಯಾಚರಣೆ ಮುಂದುವರಿಸುವ ಇರಾದೆ ಇಲ್ಲ: ವಿದೇಶ ರಾಯಭಾರಿಗಳಿಗೆ ಭಾರತದ ವಿವರ

ಏಜೆನ್ಸೀಸ್
Published 26 ಫೆಬ್ರುವರಿ 2019, 12:14 IST
Last Updated 26 ಫೆಬ್ರುವರಿ 2019, 12:14 IST
ವಾಯು ಶಕ್ತಿ ಪ್ರದರ್ಶನದ ಸಂದರ್ಭದಲ್ಲಿ ’ಮಿರಾಜ್‌ 2000’ ಯುದ್ಧ ವಿಮಾನ
ವಾಯು ಶಕ್ತಿ ಪ್ರದರ್ಶನದ ಸಂದರ್ಭದಲ್ಲಿ ’ಮಿರಾಜ್‌ 2000’ ಯುದ್ಧ ವಿಮಾನ    

ನವದೆಹಲಿ: ಪಾಕಿಸ್ತಾನದ ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ತರಬೇತಿ ಶಿಬಿರದ ಮೇಲೆ ಭಾರತದ ವಾಯುಪಡೆ ನಡೆಸಿದ ವೈಮಾನಿಕ ದಾಳಿಯ ಕುರಿತು ವಿದೇಶರಾಯಭಾರಿಗಳಿಗೆ ಭಾರತ ವಿವರಿಸಿದ್ದು, ಈ ಕಾರ್ಯಾಚರಣೆ ಮುಂದುವರಿಸುವ ಇರಾದೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

'ಗುಪ್ತಚರ ಮಾಹಿತಿಯನ್ನು ಆಧರಿಸಿ ಮಂಗಳವಾರ ಬೆಳಗಿನ ಜಾವ ನಡೆಸಲಾದ ಕಾರ್ಯಾಚರಣೆಯಲ್ಲಿ ಬಾಲಾಕೋಟ್‌ ಸಮೀಪ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ಅತಿ ದೊಡ್ಡ ತರಬೇತಿ ಕೇಂದ್ರದ ಮೇಲೆ ಭಾರತ ವೈಮಾನಿಕ ದಾಳಿ ನಡೆಸಿದೆ. ಜೆಮ್‌ನ ಉಗ್ರರು, ತರಬೇತುದಾರರು, ಹಿರಿಯ ಕಮಾಂಡರ್‌ಗಳು ಹಾಗೂ ಆತ್ಮಾಹುತಿ ದಾಳಿಗಳಿಗೆ ತರಬೇತಿ ಪಡೆದಿರುವ ಜಿಹಾದಿಗಳನ್ನು ನಿರ್ನಾಮ ಮಾಡಲಾಗಿದೆ’ ಎಂದು ವಿದೇಶಾಂಗ ಕಾರ್ಯದರ್ಶಿ ವಿಜಯ್‌ ಗೋಖಲೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮಾಧ್ಯಮ ಗೋಷ್ಠಿ ಮುಗಿಯುತ್ತಿದ್ದಂತೆ ವಿದೇಶಾಂಗ ಕಾರ್ಯದರ್ಶಿ ಸೌತ್‌ ಬ್ಲಾಕ್‌ ಕಡೆಗೆ ದೌಡಾಯಿಸಿದ್ದು, ಕಾರ್ಯದರ್ಶಿಗಳೊಂದಿಗೆ ಪ್ರತ್ಯೇಕ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ವಿದೇಶರಾಯಭಾರಿಗಳಿಗೆ ವೈಮಾನಿಕ ಕಾರ್ಯಾಚರಣೆ ಕುರಿತು ತಿಳಿಸಲಾಗಿದೆ. ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಖಾಯಂ ಸದಸ್ಯರಾದ (ಪಿ–5 ರಾಷ್ಟ್ರಗಳು) ಚೀನಾ, ಫ್ರಾನ್ಸ್‌, ರಷ್ಯಾ, ಇಂಗ್ಲೆಂಡ್‌ ಹಾಗೂ ಅಮೆರಿಕದ ರಾಯಭಾರಿಗಳಿಗೂಉಗ್ರರ ಶಿಬಿರಗಳ ಮೇಲಿನ ಕಾರ್ಯಾಚರಣೆ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಫೆ.14ರಂದು ಪುಲ್ವಾಮಾದಲ್ಲಿ ಸಿಆರ್‌ಪಿಎಫ್‌ ಸಿಬ್ಬಂದಿ ಸಾಗುತ್ತಿದ್ದ ಬಸ್‌ ಮೇಲೆ ನಡೆದ ಉಗ್ರರ ಆತ್ಮಾಹುತಿ ದಾಳಿಯ ಬಳಿಕ, ಫೆ.15 ಮತ್ತು 16ರಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ವಿದೇಶಿ ರಾಯಭಾರಿಗಳೊಂದಿಗೆ ಇಂಥದ್ದೇ ಸಭೆ ನಡೆಸಲಾಗಿತ್ತು.

ADVERTISEMENT

ಜೈಷ್‌–ಎ–ಮೊಹಮ್ಮದ್‌ ಉಗ್ರ ಸಂಘಟನೆ ವಿರುದ್ಧ ಪಾಕಿಸ್ತಾನ ಯಾವುದೇ ಕ್ರಮ ಕೈಗೊಳ್ಳಲು ನಿರಂತರವಾಗಿ ನಿರಾಕರಿಸುತ್ತಲೇ ಬಂದಿದೆ, ಈ ಹಿನ್ನೆಲೆಯಲ್ಲಿ ಭಾರತ ಕಾರ್ಯಾಚರಣೆಯ ಕ್ರಮ ಕೈಗೊಂಡಿರುವುದಾಗಿ ಭಾರತದ ಹಿರಿಯ ಅಧಿಕಾರಿಗಳು ರಾಯಭಾರಿಗಳಿಗೆ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿರುವುದು ಮೂಲಗಳಿಂದ ತಿಳಿದು ಬಂದಿರುವುದಾಗಿ ದಿ ವೈರ್‌ ವರದಿ ಮಾಡಿದೆ.

‘ನಾನ್–ಮಿಲಿಟರಿ ಆ್ಯಕ್ಷನ್’ (ಸೇನೆಯ ಮೇಲೆ ನಡೆಸಿದ ದಾಳಿ ಅಲ್ಲ) ಪದಗಳ ಬಗ್ಗೆ ವಿದೇಶಿ ಅಧಿಕಾರಿಗಳು ವಿವರಣೆ ಕೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಭಾರತ, ’ಪಾಕಿಸ್ತಾನದ ಸೇನಾ ನೆಲೆಗಳನ್ನು ಗುರಿಯಾಗಿಸಿ ಭಾರತ ಈ ದಾಳಿ ನಡೆಸಿಲ್ಲ. ಸೇನೆ ಹೊರತಾದ ಗುರಿಗಳ ಮೇಲೆ ಕಾರ್ಯಾಚರಣೆ ನಡೆಸಲಾಗಿದೆ’ ಎಂದಿದೆ.

ಬಾಲಾಕೋಟ್‌ನಲ್ಲಿ ದಾಳಿ ನಡೆದಿರುವ ನಿರ್ದಿಷ್ಟ ಸ್ಥಳದ ಬಗ್ಗೆ ಪ್ರಶ್ನೆ ಎದ್ದಿದ್ದು, ಉತ್ತರವು ಮತ್ತಷ್ಟು ಗೊಂದಲಗಳಿಗೆ ದಾರಿ ಮಾಡುತ್ತದೆ ಎನ್ನಲಾಗಿದೆ. ಕೇವಲ ಒಂದು ಸ್ಥಳವನ್ನು ಗುರಿಯಾಗಿಸಿ ದಾಳಿ ಮಾಡಲಾಗಿದೆ, ಭಾರತ ಜವಾಬ್ದಾರಿಯುತ ರೀತಿಯಲ್ಲಿ ಹಾಗೂ ಸಂಯಮದಿಂದ ವರ್ತಿಸಿದೆ ಎಂಬುದಕ್ಕೆ ಒತ್ತು ನೀಡಲಾಗಿದೆ.

’ಭಾರತ ಕಾರ್ಯಾಚರಣೆ ಮುಂದುವರಿಸುವ ಇಚ್ಛೆ ಹೊಂದಿಲ್ಲ...ಹಾಗೇ, ಅಂತರಾಷ್ಟ್ರೀಯ ಸಮುದಾಯವು ಪಾಕಿಸ್ತಾನದ ವಿರುದ್ಧ ಕ್ರಮಕೈಗೊಳ್ಳಬೇಕಾಗಿ ಒತ್ತಾಯಿಸಲಾಗಿದೆ’ ಎಂದು ಅಧಿಕಾರಿಗಳಿಂದ ತಿಳಿದು ಬಂದಿದೆ.

ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಪ್ರಯತ್ನ ನಡೆಸಲಾಗಿದೆ, ಆದರೆ ಯಾವುದೇ ನಿರ್ದಿಷ್ಟ ಕ್ರಮಗಳ ಬಗ್ಗೆ ಪ್ರಸ್ತಾಪಿಸಲಾಗಿಲ್ಲ. ಇಂದಿನ ಸಭೆ ಬಹುತೇಕ ಕಾರ್ಯಾಚರಣೆ ಬಗೆಗೆ ವಿವರಿಸುವುದಾಗಿತ್ತು ಎನ್ನಲಾಗಿದೆ. ಭಾರತದ ವೈಮಾನಿಕ ದಾಳಿಯ ಸುದ್ದಿ ತಿಳಿಯುತ್ತಿದ್ದಂತೆ ಮೊದಲಿಗೆ ಪ್ರತಿಕ್ರಿಯಿಸಿದ ಚೀನಾ, ಉಭಯ ರಾಷ್ಟ್ರಗಳು ಸಂಯಮ ಕಾಯ್ದುಕೊಳ್ಳುವಂತೆ ಹೇಳಿತ್ತು.

ಇನ್ನಷ್ಟು ಓದು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.