ADVERTISEMENT

ನಿರ್ಭಯಾ ಅತ್ಯಾಚಾರಿಗಳ ಗಲ್ಲು ಮುಂದಕ್ಕೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2020, 20:15 IST
Last Updated 31 ಜನವರಿ 2020, 20:15 IST
   

ನವದೆಹಲಿ: ನಿರ್ಭಯಾ ಪ್ರಕರಣದ ನಾಲ್ವರು ಅಪರಾಧಿಗಳಿಗೆ ವಿಧಿಸಿರುವ ಗಲ್ಲು ಶಿಕ್ಷೆ ಜಾರಿಗೊಳಿಸುವುದನ್ನು ದೆಹಲಿ ನ್ಯಾಯಾಲಯ ಶುಕ್ರವಾರ ಮುಂದೂಡಿದೆ.

ಅನಿರ್ದಿಷ್ಟಾವಧಿಯವರೆಗೆ ಶಿಕ್ಷೆಜಾರಿಗೊಳಿಸುವುನ್ನು ಮುಂದೂಡುವಂತೆ ಅಪರಾಧಿಗಳು ಸಲ್ಲಿಸಿದ್ದ ಅರ್ಜಿ ಪರಿಗಣಿಸಿ ಹೆಚ್ಚುವರಿ ಸೆಷನ್ಸ್‌ ನ್ಯಾಯಾಧೀಶ ಧರ್ಮೆಂದರ್‌ ರಾಣಾ ಈ ಆದೇಶ ನೀಡಿದ್ದಾರೆ. ಮುಂದಿನ ಆದೇಶದವರೆಗೂ ಇದು ಅನ್ವಯವಾಗಲಿದೆ.

ಅಪರಾಧಿಗಳಾದ ಪವನ್‌ ಗುಪ್ತಾ (25), ವಿನಯ ಕುಮಾರ್‌ ಶರ್ಮಾ(26),ಅಕ್ಷಯ್‌ ಕುಮಾರ್‌(31) ಮತ್ತು ಮುಕೇಶ್‌ ಕುಮಾರ್‌ ಸಿಂಗ್‌ಗೆ (32) ಫೆ. 1ರಂದು ಬೆಳಿಗ್ಗೆ 6 ಗಂಟೆಗೆ ಗಲ್ಲು ಶಿಕ್ಷೆ ವಿಧಿಸಲು ಜನವರಿ 17ರಂದು ’ಡೆತ್‌ ವಾರಂಟ್‌’ ಜಾರಿಗೊಳಿಸಲಾಗಿತ್ತು. ವಿನಯ್‌ ಸಲ್ಲಿಸಿರುವ ಕ್ಷಮಾದಾನ ಅರ್ಜಿ ರಾಷ್ಟ್ರಪತಿ ಮುಂದಿದೆ.

ADVERTISEMENT

‘ಒಬ್ಬ ಅಪರಾಧಿಯ ಕ್ಷಮಾದಾನದ ಅರ್ಜಿ ಇತ್ಯರ್ಥಗೊಂಡಿಲ್ಲ. ಹೀಗಿರುವಾಗ, ಇತರ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಬಾರದು. ಕಾನೂನಿನಲ್ಲಿ ಪರಿಹಾರ ಪಡೆಯಲು ಇನ್ನೂ ಅವಕಾಶಗಳಿವೆ’ ಎಂದು ಪವನ್‌, ವಿನಯ್‌ ಮತ್ತು ಅಕ್ಷಯ್‌ ಪರ ವಕೀಲ ಎ.ಪಿ. ಸಿಂಗ್‌ ವಾದ ಮಂಡಿಸಿದರು.

ಗಲ್ಲು ಶಿಕ್ಷೆ ಮುಂದೂಡಿರುವುದು ಇದು ಎರಡನೇ ಬಾರಿ. ಈ ಮೊದಲು ಜ. 22ರಂದು ಗಲ್ಲು ಶಿಕ್ಷೆ ವಿಧಿಸುವಂತೆ ‘ಡೆತ್‌ ವಾರಂಟ್‌’ ಜಾರಿಗೊಳಿಸಲಾಗಿತ್ತು. ಬಳಿಕ, ಫೆ. 1ಕ್ಕೆ ಮುಂದೂಡಲಾಗಿತ್ತು.

ಅರ್ಜಿ ವಜಾ: ‘2012ರ ಡಿಸೆಂಬರ್‌ 16ರಂದು ಅಪರಾಧ ನಡೆದಾಗ ನಾನು ಅಪ್ರಾಪ್ತನಾಗಿದ್ದೆ. ಹೀಗಾಗಿ, ಗಲ್ಲು ಶಿಕ್ಷೆಯ ತೀರ್ಪು ಪುನರ್‌ಪರಿಶೀಲಿಸಬೇಕು’ ಎಂದು ಅಪರಾಧಿ ಪವನ್‌ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಶುಕ್ರವಾರ ವಜಾಗೊಳಿಸಿತು.

ಹೀನ ಕೃತ್ಯಗಳಲ್ಲಿ ಅಪರಾಧಿಗಳಿಗೆ ಗಲ್ಲು ಶಿಕ್ಷೆ ಜಾರಿಯಾಗುವುದನ್ನು ವಿಳಂಬ ಮಾಡಲು ಅನುಸರಿಸುತ್ತಿರುವ ತಂತ್ರಗಳ ಬಗ್ಗೆ ಚರ್ಚೆ ನಡೆಯಬೇಕು
– ಜಿ. ಕಿಶನ್‌ ರೆಡ್ಡಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ

‘ಗಲ್ಲು ಇಲ್ಲ: ವಕೀಲರ ಸವಾಲು’

‘ಗಲ್ಲು ಶಿಕ್ಷೆ ಜಾರಿಯಾಗಲು ಸಾಧ್ಯವೇ ಇಲ್ಲ ಎಂದು ಅಪರಾಧಿಗಳ ಪರ ವಕೀಲರು ನನಗೆ ಸವಾಲು ಹಾಕಿದ್ದಾರೆ. ಕಾನೂನಿನಲ್ಲಿನ ದೋಷಗಳೇ ಇದಕ್ಕೆ ಕಾರಣ’ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ.

‘ಅಪರಾಧಿಗಳಿಗೆ ಗಲ್ಲು ಶಿಕ್ಷೆಯಾಗುವವರೆಗೂ ಹೋರಾಟ ಮುಂದುವರಿಸುತ್ತೇನೆ. ಈ ಅಪರಾಧಿಗಳಿಗೆ ಬದುಕುವ ಯಾವ ಹಕ್ಕೂ ಇಲ್ಲ. ಈ ವ್ಯವಸ್ಥೆಯಿಂದ ನಮಗೆ ಪದೇ ಪದೇ ನಿರಾಶೆಯಾಗುತ್ತಿದೆ’ ಎಂದು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.