ನವದೆಹಲಿ: ‘ರಾಜ್ಯ ಬಿಜೆಪಿಯಲ್ಲಿ ಆಂತರಿಕ ಕಚ್ಚಾಟವಿಲ್ಲ. ವಿಧಾನಸಭೆ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಲಿದ್ದು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷ ನಿರ್ಧರಿಸಲಿದೆ’ ಎಂದು ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ ಸಿಂಗ್ ಚೌಹಾಣ್ ಹೇಳಿದ್ದಾರೆ.
ಜ್ಯೋತಿರಾದಿತ್ಯ ಸಿಂಧಿಯಾ ಅವರು 2020ರಲ್ಲಿ ಬಿಜೆಪಿಗೆ ಸೇರಿದ್ದಾರೆ ಎಂದು ಉಲ್ಲೇಖಿಸಿದ ಅವರು, ಅವರ ಜೊತೆಗೆ ಪಕ್ಷವನ್ನು ಸೇರಿದ್ದವರು ಹಾಲಿನಲ್ಲಿ ಸಕ್ಕರೆ ಬೆರೆತಂತೆ ಪಕ್ಷದಲ್ಲಿ ಒಂದುಗೂಡಿದ್ದಾರೆ. ಪಕ್ಷವು ಒಗ್ಗಟ್ಟಾಗಿದೆ’ ಎಂದು ಪ್ರತಿಪಾದಿಸಿದರು.
ನಾಯಕರು ತಮ್ಮ ಆದ್ಯತೆ ಅನುಸಾರ ಕಾರ್ಯ ನಿರ್ವಹಿಸುವುದು ಸಹಜ. ಅಣ್ಣತಮ್ಮಂದಿರ ಕಾರ್ಯಶೈಲಿಯಲ್ಲಿಯೇ ಭಿನ್ನತೆ ಇರುತ್ತದೆ ಎಂದು ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.
ಟಿ.ವಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಅಭ್ಯರ್ಥಿಯನ್ನು ಪಕ್ಷ ಆಯ್ಕೆ ಮಾಡಲಿದೆ. ಜನರ ಆಶೀರ್ವಾದ ಇದೆ ಎಂಬ ಕಾರಣಕ್ಕೆ ನಾನು ಮುಖ್ಯಮಂತ್ರಿ ಆಗಿದ್ದೇನೆ. ಮೊದಲು ಮುಖ್ಯಮಂತ್ರಿ ಆದಾಗ ನನ್ನ ಆಯ್ಕೆ ಕುರಿತು ನನಗೇ ಅರಿವಿರಲಿಲ್ಲ‘ ಎಂದರು.
‘ಪಕ್ಷದ ಸಂಸದೀಯ ಮಂಡಳಿ ಸಭೆ ನಡೆದಾಗ ನಾನು ಬೇರೆಡೆ ಇದ್ದೆ. ಟಿ.ವಿ.ಚಾನಲ್ ಸುದ್ದಿ ಗಮನಿಸಿ ಪತ್ನಿ ಈ ಮಾಹಿತಿ ನೀಡಿದ್ದರು. ಆಯ್ಕೆಯ ಹಿಂದೆಯೇ ಭೂಪೇಂದರ್ ಸಿಂಗ್ ಹೂಡಾ ಅವರು ಅಭಿನಂದಿಸಲು ಮನೆಗೆ ಬಂದಿದ್ದರು’ ಎಂದು ಸ್ಮರಿಸಿದರು.
ರಾಜ್ಯ ಬಿಜೆಪಿಯಲ್ಲಿ ಮೂರು ಬಣಗಳಿವೆ ಎಂಬ ವದಂತಿ ಕುರಿತ ಪ್ರಶ್ನೆಗೆ, ‘ಕಾಂಗ್ರೆಸ್ ಪಕ್ಷದ ಸಮಸ್ಯೆ ಏನೆಂದರೆ ನಾವು ಒಗ್ಗಟ್ಟಿನಿಂದ ಕೆಲಸ ಮಾಡುವಾಗ ಅವರು ನಿದ್ರೆ ಕಳೆದುಕೊಳ್ಳುತ್ತಾರೆ. ನಾವು ಅವರಿಗೆ ದುಃಸ್ವಪ್ನವಾಗಿದ್ದೇವೆ’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.