ADVERTISEMENT

ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ: ಧರ್ಮೇಂದ್ರ ಪ್ರಧಾನ್ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಜೂನ್ 2022, 2:23 IST
Last Updated 3 ಜೂನ್ 2022, 2:23 IST
ಧರ್ಮೇಂದ್ರ ಪ್ರಧಾನ್
ಧರ್ಮೇಂದ್ರ ಪ್ರಧಾನ್   

ನವದೆಹಲಿ: ‘ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ’ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಗುಜರಾತ್‌ನಲ್ಲಿ ನಡೆದ ಎರಡು ದಿನಗಳ ಶಿಕ್ಷಣ ಸಚಿವರ ರಾಷ್ಟ್ರೀಯ ಸಮ್ಮೇಳನದಲ್ಲಿ ಮಾತನಾಡಿದ ಅವರು, ‘ಕಳೆದ ಹಲವು ದಿನಗಳಿಂದ ಭಾಷೆಗಳ ವಿಚಾರದಲ್ಲಿ ಹಲವು ಅನುಮಾನಗಳು ಎದುರಾಗಿವೆ. ಗುಜರಾತಿ ಅಥವಾ ತಮಿಳು, ಪಂಜಾಬಿ ಅಥವಾ ಅಸ್ಸಾಮಿ, ಬಂಗಾಳಿ ಅಥವಾ ಮರಾಠಿ ಎಲ್ಲ ಭಾಷೆಗಳು ರಾಷ್ಟ್ರೀಯ ಭಾಷೆಗಳು. ಯಾವ ಭಾಷೆಯೂ ಹಿಂದಿ, ಇಂಗ್ಲಿಷ್‌ಗಿಂತ ಕಡಿಮೆ ಅಲ್ಲ’ ಎಂದು ತಿಳಿಸಿದ್ದಾರೆ.

ರಾಷ್ಟ್ರೀಯ ಶಿಕ್ಷಣ ನೀತಿಯ ಕರಡು ಸಮಿತಿಯ ಮುಖ್ಯಸ್ಥರಾದ ಡಾ.ಕೆ.ಕಸ್ತೂರಿರಂಗನ್ ಅವರು ಸ್ಥಳೀಯ ಭಾಷೆಗಳು ಅಥವಾ ಬುಡಕಟ್ಟು ಭಾಷೆಗಳು ಎಂದು ಬಳಸುವ ಬದಲು ‘ಮಾತೃ ಭಾಷೆ’ಗಳು ಎಂಬ ಪದವನ್ನು ಸೂಚಿಸಿದ್ದಾರೆ. ತಂತ್ರಜ್ಞಾನದ ಸಹಾಯದಿಂದ ಈ ಎಲ್ಲಾ ಭಾಷೆಗಳನ್ನು ಪುನರುಜ್ಜೀವನಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗುವುದು ಎಂದು ಪ್ರಧಾನ್ ಹೇಳಿದ್ದಾರೆ.

ADVERTISEMENT

‘ಭವಿಷ್ಯಕ್ಕಾಗಿ ವಿದ್ಯಾರ್ಥಿಗಳನ್ನು ಸಜ್ಜುಗೊಳಿಸಲು ‘ಪಿಎಂ ಶ್ರೀ ಸ್ಕೂಲ್‌’ಗಳನ್ನು ಸ್ಥಾಪಿಸುವ ಚಿಂತನೆಯನ್ನು ಕೇಂದ್ರ ಸರ್ಕಾರ ಹೊಂದಿದೆ. ಇವು, ರಾಷ್ಟ್ರೀಯ ಶಿಕ್ಷಣ ನೀತಿಯ (ಎನ್ಇಪಿ) ಪ್ರಯೋಗಶಾಲೆಗಳು ಆಗಿರಲಿವೆ’ ಎಂದಿದ್ದಾರೆ.

‘21ನೇ ಶತಮಾನದ ಜ್ಞಾನ, ಕೌಶಲಗಳನ್ನು ಹೊಸ ಪೀಳಿಗೆಗೆ ನಿರಾಕರಿಸಲಾಗದು. ‘ಪಿಎಂ ಶ್ರೀ ಸ್ಕೂಲ್‌’ ಸ್ವರೂಪದಲ್ಲಿ ಇಡೀ ಶಿಕ್ಷಣ ವ್ಯವಸ್ಥೆ ಭವಿಷ್ಯದ ಸೂಚ್ಯಂಕವಾಗಿ ಇರಬೇಕು. ಇದಕ್ಕಾಗಿ ಎಲ್ಲ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳಿಂದ ಸಲಹೆ ಪಡೆಯಲು ಬಯಸುತ್ತೇನೆ’ ಎಂದು ತಿಳಿಸಿದ್ದಾರೆ.

‘ಹಿಂದಿ ರಾಷ್ಟ್ರ ಭಾಷೆ’ ಎಂಬ ನಟ ಅಜಯ್ ದೇವಗನ್ ಹೇಳಿಕೆ ಕುರಿತು ಇತ್ತೀಚೆಗೆಮಾತನಾಡಿದ್ದಅವರು,‘ಹಿಂದಿ ರಾಷ್ಟ್ರೀಯ ಭಾಷೆಯಲ್ಲ. ಅದು ರಾಷ್ಟ್ರೀಯ ಭಾಷೆ ಎಂದು ಯಾರೂ ಹೇಳಿಲ್ಲ.ನಾವು ಹಿಂದಿ‌ ಹೇರಿಕೆ ಕೂಡಾ ಮಾಡುವುದಿಲ್ಲ. ಇಂಥದ್ದೇ ಭಾಷೆ ಕಲಿಯಬೇಕು ಎಂದು ಯಾರ ಮೇಲೂ ಒತ್ತಡ ಹಾಕಲು ಆಗುವುದಿಲ್ಲ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.