ಚಂಡೀಗಢ: ದೆಹಲಿಯಲ್ಲಿ ನಿನ್ನೆ ನಡೆದ ರೈತರ ಟ್ರ್ಯಾಕ್ಟರ್ ಪೆರೇಡ್ ವೇಳೆ ಕೆಂಪುಕೋಟೆಯಲ್ಲಿದ್ದ ಪ್ರತಿಭಟನಾಕಾರರ ಮಧ್ಯೆ ಕಾಣಿಸಿಕೊಂಡಿದ್ದ ನಟ ದೀಪ್ ಸಿಧು ಅವರೊಂದಿಗೆ ನನಗೆ ಅಥವಾ ನನ್ನ ಕುಟುಂಬ ಸದಸ್ಯರಿಗೆ ಯಾವುದೇ ಸಂಬಂಧವಿಲ್ಲ ಎಂದು ಬಿಜೆಪಿ ಸಂಸದ ಸನ್ನಿ ಡಿಯೋಲ್ ಸ್ಪಷ್ಟಪಡಿಸಿದ್ದಾರೆ.
'ದೀಪ್ ಸಿಧು ಅವರೊಂದಿಗೆ ನನಗೂ ನನ್ನ ಕುಟುಂಬಕ್ಕೂ ಯಾವುದೇ ಸಂಬಂಧವಿಲ್ಲ ಎಂದು ನಾನು ಈಗಾಗಲೇ ಡಿಸೆಂಬರ್ 6 ರಂದು ಟ್ವಿಟರ್ ಮೂಲಕ ಸ್ಪಷ್ಟಪಡಿಸಿದ್ದೇನೆ' ಎಂದು ಡಿಯೋಲ್ ಮಂಗಳವಾರ ರಾತ್ರಿ ಟ್ವೀಟ್‌ನಲ್ಲಿ ತಿಳಿಸಿದ್ದಾರೆ.
ಜನವರಿ 26 ರಂದು ರೈತರು ಟ್ರ್ಯಾಕ್ಟರ್ ಪೆರೇಡ್ ನಡೆಸುವ ವೇಳೆ ಕೆಂಪು ಕೋಟೆಯಲ್ಲಿ ನಡೆದ ಘಟನೆಗಳ ಬಗ್ಗೆ ತೀವ್ರ ಬೇಸರವಾಗಿದೆ ಎಂದು ಡಿಯೋಲ್ ಹೇಳಿದ್ದಾರೆ.
ಜನವರಿ 26ರ ಗಣರಾಜ್ಯೋತ್ಸವ ದಿನದಂದು ಟ್ರ್ಯಾಕ್ಟರುಗಳ ಮೇಲಿದ್ದ ಹತ್ತಾರು ರೈತರು ಬ್ಯಾರಿಕೇಡ್‌ಗಳನ್ನು ಕಿತ್ತೊಗೆದು ಪೊಲೀಸರೊಂದಿಗೆ ಘರ್ಷಣೆ ನಡೆಸಿ ದೆಹಲಿಯನ್ನು ಪ್ರವೇಶಿಸಿದ್ದರು. ಟ್ರ್ಯಾಕ್ಟರ್ ರ‍್ಯಾಲಿ ವೇಳೆ ರೈತರ ಒಂದು ಗುಂಪು ನಗರದ ಬೀದಿಗಳಲ್ಲಿ ದಾಂದಲೆ ನಡೆಸಿದ್ದಲ್ಲದೆ ಪೊಲೀಸರ ಮೇಲೂ ಹಲ್ಲೆ ಮಾಡಿತ್ತು. ಕೆಂಪುಕೋಟೆ ಆವರಣಕ್ಕೆ ನುಗ್ಗಿದ ನೂರಾರು ಪ್ರತಿಭಟನಕಾರರು ಐತಿಹಾಸಿಕ ಕೆಂಪು ಕೋಟೆಯಲ್ಲಿ ಧಾರ್ಮಿಕ ಧ್ವಜವನ್ನು ಹಾರಿಸಿದ್ದರು. ಪ್ರತಿಭಟನಾನಿರತರೊಂದಿಗೆ ಪಂಜಾಬಿ ಚಲನಚಿತ್ರ ನಟ ದೀಪ್ ಸಿಧು ಕೂಡ ಇದ್ದರು.
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪಂಜಾಬ್‌ನ ಗುರುದಾಸ್‌ಪುರ ಸ್ಥಾನದಿಂದ ಸ್ಪರ್ಧಿಸಿದ್ದ ಡಿಯೋಲ್ ಅವರ ಸಹಾಯಕರಾಗಿ ಸಿಧು ಗುರುತಿಸಿಕೊಂಡಿದ್ದರು. ಈಗ ಬಿಜೆಪಿ ಸಂಸದರಾಗಿರುವ ಡಿಯೋಲ್ ಅವರು, ಸಿಧು ರೈತರ ಪ್ರತಿಭಟನೆಗೆ ಸೇರಿದ ನಂತರ ಕಳೆದ ವರ್ಷ ಡಿಸೆಂಬರ್‌ನಲ್ಲಿ ಅವರಿಂದ ದೂರವಾಗಿದ್ದರು.
ಇನ್ನಷ್ಟು...
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.