ADVERTISEMENT

ಭಾರತದಲ್ಲಿರುವ ಮುಸ್ಲಿಮರು ಔರಂಗಜೇಬ್‌ನ ವಂಶಸ್ಥರಲ್ಲ: ದೇವೇಂದ್ರ ಫಡಣವೀಸ್‌

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2023, 6:36 IST
Last Updated 19 ಜೂನ್ 2023, 6:36 IST
ದೇವೇಂದ್ರ ಫಡಣವೀಸ್‌
ದೇವೇಂದ್ರ ಫಡಣವೀಸ್‌   

ಮುಂಬೈ: ‘ಭಾರತದಲ್ಲಿರುವ ಯಾವುದೇ ಮುಸ್ಲಿಮರು ಔರಂಗಜೇಬ್‌ನ ವಂಶಸ್ಥರಲ್ಲ. ದೇಶದ ರಾಷ್ಟ್ರೀಯವಾದಿ ಮುಸ್ಲಿಮರು ಮೊಘಲ್ ಚಕ್ರವರ್ತಿಯನ್ನು ತಮ್ಮ ಆಡಳಿತಗಾರ ಎಂದು ಗುರುತಿಸುವುದಿಲ್ಲ’ ಎಂದು ಮಹಾರಾಷ್ಟ್ರ ಉಪಮುಖ್ಯಮಂತ್ರಿ ದೇವೇಂದ್ರ ಫಡಣವೀಸ್‌ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಒಂಬತ್ತು ವರ್ಷ ಪೂರೈಸಿದ ಸ್ಮರಣಾರ್ಥ ಬಿಜೆಪಿ ಸಾರ್ವಜನಿಕ ರ್‍ಯಾಲಿಯನ್ನು ಆಯೋಜಿಸಿತ್ತು.

ರ್‍ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ನಮ್ಮೆಲ್ಲರಿಗೂ ಒಬ್ಬರೇ ರಾಜ, ಅದು ಛತ್ರಪತಿ ಶಿವಾಜಿ ಮಹಾರಾಜರು. ಮುಸ್ಲಿಮರು ಸಹ ಶಿವಾಜಿ ಅವರನ್ನು ಗೌರವಿಸುತ್ತಾರೆ’ ಎಂದು ಫಡ್ನವಿಸ್ ಹೇಳಿದ್ದಾರೆ.

ADVERTISEMENT

‘ಔರಂಗಜೇಬ್ ಮತ್ತು ಅವನ ವಂಶದವರು ಹೊರಗಿನಿಂದ ವಲಸೆ ಬಂದವರಾಗಿದ್ದಾರೆ. ರಾಷ್ಟ್ರೀಯ ವಿಚಾರಗಳನ್ನು ಹೊಂದಿರುವ ಭಾರತದ ಮುಸ್ಲಿಮರು ಔರಂಗಜೇಬ್‌ನನ್ನು ಎಂದಿಗೂ ಒಪ್ಪುವುದಿಲ್ಲ’ ಎಂದು ಫಡ್ನವಿಸ್ ತಿಳಿಸಿದ್ದಾರೆ.

‘ಇದ್ದಕ್ಕಿದ್ದಂತೆ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಲ್ಲಿ ಔರಂಗಜೇಬ್‌ನ ಮಕ್ಕಳು ಹುಟ್ಟಿಕೊಂಡಿದ್ದಾರೆ. ಔರಂಗಜೇಬ್‌ ಕುರಿತಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟರ್‌ಗಳನ್ನು ಹಂಚಿಕೊಂಡಿದ್ದಾರೆ. ಇದರಿಂದ ಉದ್ವಿಗ್ನತೆ ಉಂಟಾಗಿದೆ. ಔರಂಗಜೇಬ್‌ನ ಮಕ್ಕಳು ಎಲ್ಲಿಂದ ಬರುತ್ತಾರೆ? ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ನಾವು ಕಂಡು ಹಿಡಿಯುತ್ತೇವೆ’ ಎಂದು ಫಡ್ನವಿಸ್ ಟೀಕಿಸಿದ್ದಾರೆ.

ಜೂನ್ 8ರಂದು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಕೆಲವು ಯುವಕರು ಔರಂಗಜೇಬ್ ಮತ್ತು ಟಿಪ್ಪು ಸುಲ್ತಾನ್ ಉಲ್ಲೇಖಿಸಿ ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಪೋಸ್ಟ್‌ಗಳನ್ನು ಪೋಸ್ಟ್ ಮಾಡಿದ್ದರು. ಘಟನೆ ಬಳಿಕ ಕೊಲ್ಲಾಪುರದಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.