ಸೂರತ್: ಕರ್ನಾಟಕದಲ್ಲಿ ‘ಅಮೂಲ್’ ಬಹಿಷ್ಕರಿಸುವ ಅಗತ್ಯವಿಲ್ಲ ಎಂದು ಗುಜರಾತಿನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ತಿಳಿಸಿದ್ದಾರೆ.
ಕರ್ನಾಟಕದಲ್ಲಿ ನಡೆಯುತ್ತಿರುವ ಅಮೂಲ್ ಮತ್ತು ನಂದಿನಿ ಚರ್ಚೆಗಳ ಕುರಿತು ಪ್ರತಿಕ್ರಿಯಿಸಿರುವ ಅವರು ‘ನನ್ನ ಅಭಿಪ್ರಾಯದಲ್ಲಿ, ಅಮೂಲ್ ಅನ್ನು ಬಹಿಷ್ಕರಿಸುವ ಅಗತ್ಯವಿಲ್ಲ, ನೀವು ಏನು ಮಾಡಬೇಕೆಂದು ಬಯಸುತ್ತೀರೋ ಅದನ್ನು ಮಾಡಿ. ಆದರೆ ಅಮೂಲ್ ಏನನ್ನಾದರೂ(ನಂದಿನಿ ಉತ್ಪನ್ನ) ಕಸಿದುಕೊಳ್ಳುತ್ತಿದ್ದರೆ ಮಾತ್ರ, ಅದು ಪ್ರತಿಭಟನೆಯ ವಿಷಯ’ ಎಂದು ಪಟೇಲ್ ಹೇಳಿದರು.
ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪಟೇಲ್, ಸೂರತ್ ಉತ್ತಮ ನಗರ ಯೋಜನೆಗಳನ್ನು ಹೊಂದಿದೆ. ನಗರದಲ್ಲಿ ನೀರು ಮತ್ತು ವಿದ್ಯುತ್ ಬೇಡಿಕೆಯಲ್ಲಿ ಹೆಚ್ಚಳ ಕಂಡುಬಂದಿದೆ. ಜನರು ಮತ್ತು ವ್ಯಾಪಾರ ಚಟುವಟಿಕೆಗಳಿಗೆ ನೀರು ಪ್ರಮುಖವಾದದ್ದು. ವಿದ್ಯುತ್ ಬೇಡಿಕೆಗಳನ್ನು ಪೂರೈಸಲು ನವೀಕರಿಸಬಹುದಾದ ಇಂಧನದತ್ತ ಗಮನಹರಿಸಲಾಗುತ್ತಿದೆ. ಗುಜರಾತ್ ನೈಸರ್ಗಿಕ ಕೃಷಿಯತ್ತ ಸಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.
ಕೋವಿಡ್ ನಂತರದ ದಿನಗಳಲ್ಲಿ ಕ್ಯಾನ್ಸರ್ ಮತ್ತು ಮಧುಮೇಹದಂತಹ ಕಾಯಿಲೆಗಳು ಹೆಚ್ಚುತ್ತಿರುವ ಕಾರಣ 40 ರಿಂದ 50 ವರ್ಷದ ಜನರು ಪೂರ್ಣ ದೇಹದ ತಪಾಸಣೆಗೆ ಒಳಗಾಗಿದ್ದಾರೆ. ಈ ಹಿಂದೆ ಜನರು 50 ವರ್ಷ ಪೂರ್ಣಗೊಂಡ ನಂತರದಲ್ಲಿ ದೇಹದ ತಪಾಸಣೆಯ ಬಗ್ಗೆ ಯೋಚಿಸುತ್ತಿದ್ದರು, ಆದರೆ ಇದೀಗ ರಾಸಾಯನಿಕಗಳಿಂದಾಗಿ ಆರೋಗ್ಯ ಹಾಳಾಗುತ್ತಿದೆ ಎಂದು ಪಟೇಲ್ ತಿಳಿಸಿದ್ದಾರೆ.
ನೈಸರ್ಗಿಕ ಕೃಷಿಯೇ ನಮ್ಮ ಮುಂದಿರುವ ದಾರಿ ಎಂದು ಒತ್ತಿ ಹೇಳಿದ ಅವರು, ವಿರೋಧ ಪಕ್ಷಗಳು ಕೃಷಿಯ ಬಗ್ಗೆ ಧ್ವನಿ ಎತ್ತಿದಾದರೂ ಯಾವ ರೈತರಿಗೂ ನಮ್ಮ ಸರ್ಕಾರದ ವಿರುದ್ಧ ಯಾವುದೇ ದೂರು ಇಲ್ಲ ಎಂದಿದ್ದಾರೆ.
‘ರೈತರು ಅವರನ್ನು (ವಿರೋಧ ಪಕ್ಷಗಳು) ಬೆಂಬಲಿಸುತ್ತಿಲ್ಲ, ಏನು ಬೇಕಾದರೂ ಹೇಳಬಹುದು’ ಎಂದು ಪಟೇಲ್ ಹೇಳಿದ್ದಾರೆ.
ಕರ್ನಾಟಕದಲ್ಲಿ ಅಮೂಲ್ ತನ್ನ ಅಸ್ಥಿತ್ವ ಭದ್ರಪಡಿಸಿಕೊಳ್ಳಲು ನಂದಿನಿ ಉತ್ಪನ್ನಗಳ ಕೊರತೆಯನ್ನು ಸೃಷ್ಟಿಸಲಾಗುತ್ತದೆ ಎಂದು ಕರ್ನಾಟಕದ ಕಾಂಗ್ರೆಸ್ ಮತ್ತು ಜನತಾ ದಳ (ಜೆಡಿಎಸ್) ಆತಂಕ ವ್ಯಕ್ತಪಡಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಆರೋಪವನ್ನು ನಿರಾಕರಿಸಿದ್ದು, ನಂದಿನಿಗೆ ಅಮೂಲ್‌ನಿಂದ ಯಾವುದೇ ತೊಂದರೆ ಇಲ್ಲ ಎಂದು ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.