ನವದೆಹಲಿ: ‘ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು (ಪಿಒಕೆ) ಭಾರತವು ಬಲ ಪ್ರಯೋಗ ಮಾಡಿ ವಶಪಡಿಸಿಕೊಳ್ಳವ ಅಗತ್ಯವಿಲ್ಲ. ಕಾಶ್ಮೀರದ ಬೆಳವಣಿಗೆಯನ್ನು ಗಮನಿಸಿದ ಬಳಿಕ ಅಲ್ಲಿನ ಜನರೇ ಭಾರತದೊಂದಿಗೆ ಸೇರಲು ಬಯಸುತ್ತಾರೆ’ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಪ್ರತಿಪಾದಿಸಿದರು.
ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತವು ಪಿಒಕೆ ಮೇಲಿನ ತನ್ನ ಹಕ್ಕನ್ನು ಎಂದಿಗೂ ಬಿಟ್ಟುಕೊಡುವುದಿಲ್ಲ ಎಂದರು.
‘ಜಮ್ಮು ಮತ್ತು ಕಾಶ್ಮೀರವು ಆರ್ಥಿಕ ಪ್ರಗತಿಗೆ ಸಾಕ್ಷಿಯಾಗುತ್ತಿದ್ದು, ಅಲ್ಲಿ ಶಾಂತಿ ಮರಳಿದೆ. ಹೀಗಾಗಿ ಭಾರತದೊಂದಿಗೆ ವಿಲೀನಗೊಳಿಸುವ ಕುರಿತು ಪಿಒಕೆಯ ಜನರಿಂದಲೇ ಬೇಡಿಕೆಗಳು ಬರಲಿವೆ’ ಎಂದು ಅವರು ಪ್ರತಿಕ್ರಿಯಿಸಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಪರಿಸ್ಥಿತಿ ಗಮನಾರ್ಹವಾಗಿ ಸುಧಾರಿಸಿದ್ದು, ಕೇಂದ್ರಾಡಳಿತ ಪ್ರದೇಶದಲ್ಲಿ ಇನ್ನು ಮುಂದೆ ಸಶಸ್ತ್ರ ಪಡೆಗಳ ವಿಶೇಷಾಧಿಕಾರ ಕಾಯ್ದೆ (ಎಎಫ್‌ಎಸ್‌ಪಿಎ) ಅಗತ್ಯವಿಲ್ಲದ ಸಮಯ ಬರಲಿದೆ ಎಂದು ಹೇಳಿದರು.
ಈ ಕುರಿತು ಸೂಕ್ತ ನಿರ್ಧಾರವನ್ನು ಕೇಂದ್ರ ಗೃಹ ಸಚಿವಾಲಯ ತೆಗೆದುಕೊಳ್ಳುತ್ತದೆ ಎಂದ ಅವರು, ಶೀಘ್ರದಲ್ಲಿಯೇ ಅಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದೆ ಎಂದರು. ಆದರೆ ಯಾವಾಗ ನಡೆಯುತ್ತದೆ ಎಂಬುದನ್ನು ಅವರು ತಿಳಿಸಲಿಲ್ಲ.
ಇಸ್ಲಾಮಾಬಾದ್ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಿಲ್ಲಿಸಬೇಕು ಎಂದ ಅವರು, ಪಾಕಿಸ್ತಾನವು ‘ಪ್ರಾಕ್ಸಿ ಯುದ್ಧ’ದ ಮೂಲಕ ಭಾರತವನ್ನು ಅಸ್ಥಿರಗೊಳಿಸಲು ಯತ್ನಿಸುತ್ತಿದೆ. ಆದರೆ ಅದಕ್ಕೆ ಭಾರತ ಅವಕಾಶ ಕೊಡುವುದಿಲ್ಲ ಎಂದು ಅವರು ಉತ್ತರಿಸಿದರು.
ಭಾರತ– ಚೀನಾ ಮಾತುಕತೆಯಿಂದ ಸಮಸ್ಯೆಗೆ ಪರಿಹಾರ: ಭರವಸೆ
ಭಾರತ ಮತ್ತು ಚೀನಾ ನಡುವೆ ಪೂರ್ವ ಲಡಾಖ್‌ನಲ್ಲಿ ವಾಸ್ತವ ನಿಯಂತ್ರಣ ರೇಖೆಯ (ಎಲ್‌ಎಸಿ) ಉದ್ದಕ್ಕೂ ಎದುರಾಗಿರುವ ಬಿಕ್ಕಟ್ಟಿಗೆ ಸಂಬಂಧಿಸಿದತೆ ಎರಡೂ ದೇಶಗಳ ನಡುವೆ ಮಾತುಕತೆಗಳು ಉತ್ತಮವಾಗಿ ನಡೆಯುತ್ತಿದ್ದು ದೀರ್ಘಕಾಲದ ವಿವಾದಕ್ಕೆ ಪರಿಹಾರ ದೊರೆಯುವ ಭರವಸೆ ಇದೆ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದರು.
ಭಾರತವು ಗಡಿ ಭಾಗದಲ್ಲಿ ತ್ವರಿತವಾಗಿ ಮೂಲಸೌಕರ್ಯ ವೃದ್ಧಿಸುತ್ತಿದೆ. ಇದರಿಂದ ದೇಶದ ಗಡಿಗಳು ಸುರಕ್ಷಿತವಾಗಿ ಉಳಿಯುತ್ತವೆ ಎಂದು ಅವರು ಪ್ರತಿಪಾದಿಸಿದರು. ಮಾತುಕತೆಗಳಿಂದ ಸಕಾರಾತ್ಮಕ ಫಲಿತಾಂಶ ನಿರೀಕ್ಷಿಸಲಾಗಿದೆಯೇ ಮತ್ತು ಎರಡೂ ಮಿಲಿಟರಿಗಳ ನಡುವೆ ನಾಲ್ಕು ವರ್ಷಗಳಿಂದ ಇರುವ ಉದ್ವಿಗ್ನ ಸ್ಥಿತಿ ಶಮವಾಗುವ ಭರವಸೆ ಇದೆಯೇ ಎಂಬ ಪ್ರಶ್ನೆಗೆ ‘ಈ ಕುರಿತು ಯಾವುದೇ ಭರವಸೆ ಇಲ್ಲದಿದ್ದರೆ ಏಕೆ ಮಾತುಕತೆ ನಡೆಸುತ್ತಿದ್ದೆವು’ ಎಂದರು.
‘ಚೀನಾ ಸಹ ಈ ಸಂಬಂಧ ಭರವಸೆ ಹೊಂದಿದೆ. ಅದಕ್ಕಾಗಿಯೇ ಅವರೂ ಮಾತುಕತೆ ನಡೆಸುತ್ತಿದ್ದಾರೆ’ ಎಂದು ರಕ್ಷಣಾ ಸಚಿವರು ಪ್ರತಿಕ್ರಿಯಿಸಿದರು. ಆದರೆ ಈ ಕುರಿತು ಹೆಚ್ಚಿನ ಮಾಹಿತಿ ನೀಡಲು ಅವರು ನಿರಾಕರಿಸಿದರು.
ಪೂರ್ವ ಲಡಾಖ್ ಬಿಕ್ಕಟ್ಟಿನ ಕುರಿತು ಸರ್ಕಾರದ ವಿರುದ್ಧ ನಿರಂತರ ವಾಗ್ದಾಳಿ ಮಾಡುತ್ತಿರುವ ಕಾಂಗ್ರೆಸ್ ವಿರುದ್ಧ ಅವರು ಹರಿಹಾಯ್ದರು. ‘ಅವರು (ಕಾಂಗ್ರೆಸ್) ಭಾರತೀಯ ಸೈನಿಕರ ಶೌರ್ಯವನ್ನು ಪ್ರಶ್ನಿಸುತ್ತಿದ್ದಾರೆ. ನೀವು ಯಾರ ಸ್ಥೈರ್ಯವನ್ನು ಕುಗ್ಗಿಸುತ್ತಿದ್ದೀರಿ? ನಿಮ್ಮ ಉದ್ದೇಶವೇನು?’ ಎಂದು ಪ್ರಶ್ನಿಸಿದರು. ಅಲ್ಲದೆ ‘ನಾನು ಸಹ 1962ರ ಘಟನೆಗಳನ್ನು ಪ್ರಸ್ತಾಪಿಸಬಹುದು’ ಎಂದರು.
ಉಭಯ ದೇಶಗಳ ನಡುವೆ ಕಳೆದ ಫೆಬ್ರುವರಿಯಲ್ಲಿ 21ನೇ ಸುತ್ತಿನ ಉನ್ನತ ಮಟ್ಟದ ಮಿಲಿಟರಿ ಮಾತುಕತೆಗಳು ನಡೆದಿದ್ದವು. ಈ ವೇಳೆ ಅಷ್ಟೇನು ಪ್ರಗತಿ ಸಾಧಿಸಲು ಆಗದಿದ್ದರೂ ಉಭಯ ದೇಶಗಳು ಶಾಂತಿ ಮತ್ತು ಸುವ್ಯವಸ್ಥೆ ಕಾಯ್ದುಕೊಳ್ಳಲು ಹಾಗೂ ಮಾತುಕತೆಯನ್ನು ಮುಂದುವರಿಸಲು ಸಮ್ಮತಿಸಿದ್ದವು. ಮುಂದಿನ ಸುತ್ತಿನ ಸೇನಾ ಮಾತುಕತೆ ಸದ್ಯದಲ್ಲಿಯೇ ಜರುಗಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.