ಮುಂಬೈ: ದೇಶದ ಒಗ್ಗಟ್ಟು ಮತ್ತು ಪ್ರಗತಿಯ ಬಗ್ಗೆ ಕಾಳಜಿ ಹೊಂದಿರುವ ಜನರು ಪೌರತ್ವ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ ಎಂದು ಎನ್‌ಸಿಪಿ ಮುಖಂಡ ಶರದ್ ಪವಾರ್ ಹೇಳಿದ್ದಾರೆ.
ಮುಂಬೈನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ‘ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್ಆರ್‌ಸಿ) ಯನ್ನು ಕೇವಲ ಅಲ್ಪಸಂಖ್ಯಾತರು ವಿರೋಧಿಸುತ್ತಿಲ್ಲ. ದೇಶದ ಒಗ್ಗಟ್ಟು ಮತ್ತು ಪ್ರಗತಿಯ ಬಗ್ಗೆ ಕಾಳಜಿ ಹೊಂದಿರುವ ಜನರು ಈ ಕಾಯ್ದೆಗಳನ್ನು ವಿರೋಧಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಜಾರಿ ಮಾಡಲು ಹೊರಡುತ್ತಿರುವ ಕಾಯ್ದೆಗಳು ದೇಶದ ಕಾನೂನು ವ್ಯವಸ್ಥೆಯನ್ನು ಹಾಳು ಮಾಡಲಿವೆ. ಇದರಿಂದ ಧಾರ್ಮಿಕ ಹಾಗೂ ಸಾಮಾಜಿಕ ಸಾಮರಸ್ಯ ಹದಗೆಡಲಿದೆ,’ ಎಂದು ಪವಾರ್ ತಿಳಿಸಿದ್ದಾರೆ.
‘ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಆಫ್ಘಾನಿಸ್ತಾನದಿಂದ ಬಂದಿರುವ ವಲಸಿಗರಿಗೆ ಮಾತ್ರ ಪೌರತ್ವ ನೀಡಲಾಗುತ್ತಿದೆ. ಶ್ರೀಲಂಕಾದಿಂದ ಬಂದಿರುವ ತಮಿಳರನ್ನು ಏಕೆ ಕಡೆಗಣಿಸಲಾಗಿದೆ,’ ಎಂದು ಪವಾರ್ ಪ್ರಶ್ನಿಸಿದ್ದಾರೆ.
ದೇಶ ಎದುರಿಸುತ್ತಿರುವ ಗಂಭೀರ ಸಮಸ್ಯೆಗಳಿಂದ ಜನರ ಗಮನ ಬೇರೆಡೆ ಸೆಳೆಯಲು ಎನ್‌ಆರ್‌ಸಿ ಮತ್ತು ಸಿಎಎ ವಿಚಾರಗಳನ್ನು ಮುನ್ನೆಲೆಗೆ ತರಲಾಗಿದೆ ಎಂದಿರುವ ಅವರು, ‘ಎನ್‌ಡಿಎ ಮೈತ್ರಿಕೂಟದಲ್ಲಿರುವ ಬಿಹಾರ ಸೇರಿದಂತೆ ದೇಶದ ಎಂಟು ರಾಜ್ಯಗಳು ಎನ್‌ಆರ್‌ಸಿ ಮತ್ತು ಸಿಎಎ ಕಾಯ್ದೆಗಳನ್ನು ಜಾರಿಗೊಳಿಸಲು ನಿರಾಕರಿಸಿವೆ. ಮಹಾರಾಷ್ಟ್ರವು ಇದೇ ರೀತಿಯ ನಡೆಯನ್ನು ಅನುಸರಿಸಬೇಕು,’ ಎಂದು ಶರದ್ ಪವಾರ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.