ADVERTISEMENT

ಕೌಟುಂಬಿಕ ದೌರ್ಜನ್ಯ ಪ್ರಕರಣ: ಗಾಯಕ ಹನಿ ಸಿಂಗ್ ವಿಚಾರಣೆಗೆ ಗೈರು, ಕೋರ್ಟ್ ಆಕ್ಷೇಪ

ಪಿಟಿಐ
Published 28 ಆಗಸ್ಟ್ 2021, 10:01 IST
Last Updated 28 ಆಗಸ್ಟ್ 2021, 10:01 IST
ಹನಿ ಸಿಂಗ್
ಹನಿ ಸಿಂಗ್   

ನವದೆಹಲಿ: ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪ ಎದುರಿಸುತ್ತಿರುವ ಪಂಜಾಬಿ ಗಾಯಕ ಯೋ ಯೋ ಹನಿ ಸಿಂಗ್‌, ನ್ಯಾಯಾಲಯದ ವಿಚಾರಣೆಗೆ ಹಾಜರಾಗದಿದ್ದಕ್ಕೆ ದೆಹಲಿ ಕೋರ್ಟ್‌ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

‘ಕಾನೂನಿಗಿಂತ ಯಾರು ದೊಡ್ಡವರಲ್ಲ‘ ಎಂದು ಹೇಳಿದ ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ತಾನಿಯಾ ಸಿಂಗ್‌, ‘ಆರೋಪಿ ಈ ಪ್ರಕರಣವನ್ನು ಲಘುವಾಗಿ ಪರಿಗಣಿಸಿರುವುದನ್ನು ನೋಡಿ ಅಚ್ಚರಿಯಾಗಿದೆ‘ ಎಂದರು.

ತೀವ್ರ ಆರೋಗ್ಯ ಸಮಸ್ಯೆಯ ಕಾರಣದಿಂದ ಈ ಪ್ರಕರಣದ ವಿಚಾರಣೆಗೆ ಹಾಜರಾಗುವುದಕ್ಕೆ ವಿನಾಯಿತಿ ನೀಡುವಂತೆ ಕೋರಿ ಹನಿಸಿಂಗ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ಹನಿಸಿಂಗ್‌ ಪತ್ನಿ ಶಾಲಿನಿ ತಲ್ವಾರ್ ಅವರು ನ್ಯಾಯಾಲಯದಲ್ಲಿ ವಿಚಾರಣೆಗಾಗಿ ಭೌತಿಕವಾಗಿ ಹಾಜರಾಗಿದ್ದರು.

ADVERTISEMENT

ಹನಿಸಿಂಗ್ ಪರ ವಕೀಲರನ್ನು ಕುರಿತು ನ್ಯಾಯಾಲಯ, ‘ಹನಿಸಿಂಗ್‌ ನ್ಯಾಯಾಲಯಕ್ಕೆ ಹಾಜರಾಗಿಲ್ಲ. ನೀವು ಅವರ ಆದಾಯದ ಪ್ರಮಾಣಪತ್ರವನ್ನು ಸಲ್ಲಿಸಿಲ್ಲ. ಈ ಪ್ರಕರಣದಲ್ಲಿ ವಾದಮಾಡಲು ಸಿದ್ದರಾಗಿ ಬಂದಿಲ್ಲ‘ ಎಂದು ಅಸಮಾಧಾನ ವ್ಯಕ್ತಪಡಿಸಿತು.

ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್‌ ಅವರು ಸಿಂಗ್ ಅವರಿಗೆ ನ್ಯಾಯಾಲಯಕ್ಕೆ ಹಾಜರಾಗಲು ಕೊನೆಯ ಅವಕಾಶವನ್ನು ನೀಡಿದರು. ಹೀಗೆ ವಿಚಾರಣೆಗೆ ಗೈರಾಗುವುದನ್ನು ಪದೇ ಪದೇ ಮುಂದುವರಿಸದಂತೆ ಸಿಂಗ್‌ ಅವರಿಗೆ ಎಚ್ಚರಿಕೆ ನೀಡಿತು.

ಬಾಲಿವುಡ್‌ ಗಾಯಕ ಯೋ, ಯೋ ಹನಿ ಸಿಂಗ್‌ ವಿರುದ್ಧ ಅವರ ಪತ್ನಿ ಶಾಲಿನಿ ತಲ್ವಾರ್‌ ಕೌಟುಂಬಿಕ ದೌರ್ಜನ್ಯ ಕಾಯ್ದೆಯಡಿ ದೂರು ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.