ADVERTISEMENT

ಸೂಕ್ತ ಆದೇಶವಿಲ್ಲದೇ ಯಾರೂ ಜೈಲುವಾಸ ಅನುಭವಿಸಬಾರದು: ಸುಪ್ರೀಂಕೋರ್ಟ್

ಪಿಟಿಐ
Published 1 ಏಪ್ರಿಲ್ 2023, 15:23 IST
Last Updated 1 ಏಪ್ರಿಲ್ 2023, 15:23 IST
ಸುಪ್ರೀಂಕೋರ್ಟ್
ಸುಪ್ರೀಂಕೋರ್ಟ್   

ನವದೆಹಲಿ: ಕಾನೂನಾತ್ಮಕ ಪ್ರಕ್ರಿಯೆ ಪೂರ್ಣಗೊಂಡು, ಸೂಕ್ತ ಆದೇಶವಿರದ ಹೊರತು ಯಾವ ವ್ಯಕ್ತಿಯೂ ಕಾರಾಗೃಹವಾಸ ಅನುಭವಿಸುವಂತಾಗಬಾರದು ಎಂದು ಸುಪ್ರೀಂ ಕೋರ್ಟ್‌ ಹೇಳಿದೆ.

ಸುರಕ್ಷತೆಯನ್ನು ಖಾತರಿಪಡಿಸುವುದು ಹಾಗೂ ಅಪರಾಧ ಕೃತ್ಯಗಳನ್ನು ತಡೆಗಟ್ಟುವುದು ಸರ್ಕಾರದ ಕರ್ತವ್ಯವಾಗಿದ್ದರೂ, ವೈಯಕ್ತಿಕ ಸ್ವಾತಂತ್ರ್ಯವು ಗೌಣವಾಗಬಾರದು ಎಂದೂ ಹೇಳಿದೆ.

‘ಡಿಫಾಲ್ಟ್‌ ಜಾಮೀನು’ ಕುರಿತ ಅರ್ಜಿಯೊಂದರ ವಿಚಾರಣೆ ನಡೆಸಿದ, ನ್ಯಾಯಮೂರ್ತಿಗಳಾದ ಕೆ.ಎಂ.ಜೋಸೆಫ್, ಹೃಷಿಕೇಶರಾಯ್ ಹಾಗೂ ಬಿ.ವಿ.ನಾಗರತ್ನ ಅವರಿದ್ದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿತು.

ADVERTISEMENT

ಯೆಸ್‌ ಬ್ಯಾಂಕ್‌ಗೆ ಸಂಬಂಧಿಸಿದ ಹಣದ ಅಕ್ರಮ ವರ್ಗಾವಣೆ ಪ್ರಕರಣದ ಆರೋಪಿಗಳಾದ ಡಿಎಚ್ಎಫ್‌ಎಲ್‌ ಪ್ರವರ್ತಕರಾದ ಕಪಿಲ್ ವಾಧ್ವಾನ್ ಮತ್ತು ಧೀರಜ್‌ ವಾಧ್ವಾನ್‌ ಅವರಿಗೆ ಡಿಫಾಲ್ಟ್‌ ಜಾಮೀನು ಮಂಜೂರು ಮಾಡಿ ಬಾಂಬೆ ಹೈಕೋರ್ಟ್ ಹೊರಡಿಸಿರುವ ಆದೇಶವನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ ಮೇಲ್ಮನವಿ ಸಲ್ಲಿಸಿತ್ತು.

ಪ್ರಾಸಿಕ್ಯೂಷನ್ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸದ ಕಾರಣ ಆರೋಪಿಯು, ಕಾನೂನುಬದ್ಧವಾಗಿ ತಂತಾನೆ ಪಡೆಯಬಹುದಾದ ಜಾಮೀನಿಗೆ ‘ಡಿಫಾಲ್ಟ್‌’ ಜಾಮೀನು ಎನ್ನಲಾಗುತ್ತದೆ.

ಡಿಫಾಲ್ಟ್‌ ಜಾಮೀನು ನೀಡುವ ಸಂದರ್ಭದಲ್ಲಿ, ಆರೋಪಿಯನ್ನು ಕಸ್ಟಡಿಗೆ ಒಪ್ಪಿಸಿದ ದಿನವನ್ನು ಪರಿಗಣಿಸಬೇಕೇ ಅಥವಾ ಬಿಡಬೇಕೇ ಎಂಬ ಬಗ್ಗೆ ನ್ಯಾಯಪೀಠ ಪರಿಶೀಲನೆ ನಡೆಸಿತು.

ಪ್ರಾಸಿಕ್ಯೂಷನ್ 60 ದಿನಗಳ ಒಳಗಾಗಿ ದೋಷಾರೋಪ ಪಟ್ಟಿ ಸಲ್ಲಿಸದಿದ್ದಲ್ಲಿ, ಸಿಆರ್‌ಪಿಸಿ ಸೆಕ್ಷನ್‌ 167ರ ಪ್ರಕಾರ, ಆರೋಪಿಯು ಡಿಫಾಲ್ಟ್‌ ಜಾಮೀನು ಪಡೆಯಲು ಅರ್ಹನಾಗುತ್ತಾನೆ. ಕೆಲ ಅಪರಾಧಗಳಿಗೆ ಸಂಬಂಧಿಸಿ, ದೋಷಾರೋಪ ‍ಪಟ್ಟಿ ಸಲ್ಲಿಸುವ ಅವಧಿಯನ್ನು 90 ದಿನಗಳ ವರೆಗೆ ವಿಸ್ತರಿಸಲು ಅವಕಾಶ ಇದೆ.

ಈ ಕುರಿತ ವಾದ–ಪ್ರತಿವಾದಗಳನ್ನು ಆಲಿಸಿದ ನ್ಯಾಯಪೀಠ, ‘ಡಿಫಾಲ್ಟ್‌ ಜಾಮೀನು ನೀಡಲು, ಆರೋಪಿಯನ್ನು ಕಸ್ಟಡಿಗೆ ಒಪ್ಪಿಸಿದ ದಿನವನ್ನೂ ಪರಿಗಣಿಸಬೇಕು’ ಎಂದು ಹೇಳಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.