ಹೈದರಾಬಾದ್: ದೆಹಲಿ ಅಬಕಾರಿ ನೀತಿ ಪ್ರಕರಣಕ್ಕೆ ಸಂಬಂಧಿಸಿದಂತೆ ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಅವರ ಪುತ್ರಿ ಸೇರಿದಂತೆ ತನಿಖಾ ಸಂಸ್ಥೆಯೂ ಯಾರನ್ನೂ ಬಿಡುವುದಿಲ್ಲ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವ ಅನುರಾಗ್ ಠಾಕೂರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಠಾಕೂರ್, ತೆಲಂಗಾಣದ ಆಡಳಿತಾರೂಢ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಜೊತೆ ಬಿಜೆಪಿ ಹೊಂದಾಣಿಕೆಯನ್ನು ಮಾಡಿಕೊಂಡಿದೆ ಎಂಬ ಆರೋಪವನ್ನು ತಳ್ಳಿಹಾಕಿದರು. ಬಿಆರ್‌ಎಸ್‌ನೊಂದಿಗೆ ಬಿಜೆಪಿ ಯಾವುದೇ ಹೊಂದಾಣಿಕೆಯನ್ನು ಹೊಂದಿಲ್ಲ ಎಂದು ತಿಳಿಸಿದರು.
‘ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಕವಿತಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ತನಿಖಾ ಸಂಸ್ಥೆಗಳು ಈ ವಿಷಯದ ಕುರಿತು ತನಿಖೆ ನಡೆಸುತ್ತಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಅವರನ್ನು ಹೊರತುಪಡಿಸಿಲ್ಲ. ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಿಗೂ ನೋಟಿಸ್ ಜಾರಿ ಮಾಡಲಾಗಿದೆ. ಅದೇ ರೀತಿ ಕವಿತಾ ಅವರಿಗೂ ನೋಟಿಸ್ ಜಾರಿ ಮಾಡುವ ದಿನ ದೂರವಿಲ್ಲ’ ಎಂದು ಅವರು ಹೇಳಿದರು.
‘ಪ್ರಕರಣಕ್ಕೆ ಸಂಬಂಧಿಸಿದಂತೆ ಯಾರನ್ನೂ ಬಿಡಲಾಗುವುದಿಲ್ಲ, ಯಾರೇ ಭಾಗಿಯಾಗಿದ್ದರೂ ಅವರ ಹೆಸರು ಒಂದೊಂದಾಗಿ ಹೊರ ಬರುತ್ತದೆ ಮತ್ತು ಹಗರಣದ ಕಿಂಗ್‌ಪಿನ್ ಕೇಜ್ರಿವಾಲ್ ಅವರಿಗೆ ಈಗಾಗಲೇ ಸಮನ್ಸ್ ನೀಡಲಾಗಿದೆ. ಹಾಗೆಯೇ, ತೆಲಂಗಾಣದ ಕಾಳೇಶ್ವರಂ ನೀರಾವರಿ ಯೋಜನೆಯಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಕುರಿತು ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಠಾಕೂರ್ ತಿಳಿಸಿದರು.
‘ಕೆಸಿಆರ್ ನೀವು ನಿಮ್ಮ ಪಕ್ಷದ ಹೆಸರನ್ನು ಟಿಆರ್‌ಎಸ್‌ನಿಂದ ಬಿಆರ್‌ಎಸ್ ಎಂದು ಬದಲಾಯಿಸಬಹುದು. ಆದರೆ, ನಿಮ್ಮ ಭ್ರಷ್ಟ ಮುಖವಾಡ ಮತ್ತು ನಿಮ್ಮ ಕುಟುಂಬದ ಭ್ರಷ್ಟಾಚಾರವನ್ನು ಮರೆಮಾಚಲು ಸಾಧ್ಯವಿಲ್ಲ. ನೀವು ಮಾಡಿದ ಭ್ರಷ್ಟಾಚಾರವು ನಿಮ್ಮನ್ನು ಜೈಲಿಗೆ ಕಳುಹಿಸುತ್ತದೆ’ ಎಂದು ಕೆಸಿಆರ್ ವಿರುದ್ಧ ಠಾಕೂರ್ ವಾಗ್ದಾಳಿ ನಡೆಸಿದರು.
ದೆಹಲಿ ಅಬಕಾರಿ ನೀತಿ ಹಗರಣಕ್ಕೆ ಸಂಬಂಧಿಸಿದ ಹಣ ಅಕ್ರಮ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಬಿಆರ್‌ಎಸ್ ನಾಯಕಿ, ಪಕ್ಷದ ಎಂಎಲ್‌ಸಿ ಸಿ. ಕವಿತಾ ಅವರ ಹೆಸರನ್ನು ಉಲ್ಲೇಖಿಸಲಾಗಿದೆ. ಅಲ್ಲದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಕೇಜ್ರಿವಾಲ್ ಅವರನ್ನು ಇ.ಡಿ ವಿಚಾರಣೆಗೆ ಕರೆದಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.