ADVERTISEMENT

ಸ್ವಾಭಿಮಾನವುಳ್ಳವರು ಟಿಎಂಸಿಯಲ್ಲಿರಲು ಅಸಾಧ್ಯ: ಸುವೇಂದು ಅಧಿಕಾರಿ

ಟಿಎಂಸಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಶಾಸಕ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2020, 14:45 IST
Last Updated 22 ಡಿಸೆಂಬರ್ 2020, 14:45 IST
ಸುವೆಂದು ಅಧಿಕಾರಿ
ಸುವೆಂದು ಅಧಿಕಾರಿ   

ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ಆಡಳಿತ ಪಕ್ಷವು ಒಂದು ಕಂಪನಿಯಾಗಿ ಮಾರ್ಪಟ್ಟಿದೆ. ಸ್ವಾಭಿಮಾನವಿರುವ ಯಾರೇ ಆಗಲಿ ಟಿಎಂಸಿಯಲ್ಲಿ ಉಳಿಯಲು ಸಾಧ್ಯವಿಲ್ಲ ಎಂದು ಇತ್ತೀಚೆಗಷ್ಟೇ ಬಿಜೆಪಿಗೆ ಸೇರ್ಪಡೆಯಾದ ಟಿಎಂಸಿಯ ಮಾಜಿ ಶಾಸಕ ಸುವೆಂದು ಅಧಿಕಾರಿ ಹೇಳಿದ್ದಾರೆ.

ತಮ್ಮನ್ನು ‘ಮೀರ್ ಜಾಫರ್’ ಎಂದು ಕರೆದ ಕುರಿತಾಗಿಯೂ ಟಿಎಂಸಿ ವಿರುದ್ಧ ಸುವೆಂದು ವಾಗ್ದಾಳಿ ನಡೆಸಿದ್ದಾರೆ.

ಪೂರ್ವ ಬರ್ಧಮಾನ್ ಜಿಲ್ಲೆಯ ಪುರ್ಬಸ್ತಾಲಿಯ ರ‍್ಯಾಲಿಯಲ್ಲಿ, ಮಮತಾ ಬ್ಯಾನರ್ಜಿ ಅವರ ‘ಬದಲಾವಣೆ’ ಘೋಷಣೆಯನ್ನು ಉಲ್ಲೇಖಿಸಿದ ಸುವೆಂದು, ‘ಬದಲಾವಣೆಗಾಗಿ ಬದಲಾವಣೆ’ ಅನ್ನುವ ಒಂದೇ ಕಾರಣಕ್ಕಾಗಿ ನಾನು ಬಿಜೆಪಿಗೆ ಸೇರ್ಪಡೆಗೊಂಡೆ. ನಾನು ಮೀರ್ ಜಾಫರನೂ ಅಲ್ಲ ದೇಶದ್ರೋಹಿಯೂ ಅಲ್ಲ. ಟಿಎಂಸಿ ಪಕ್ಷವು ಒಂದು ಗುಂಪಾಗಿ ಮಾರ್ಪಟ್ಟಿದೆಯಷ್ಟೇ. ಸ್ವಾಭಿಮಾನ ಇರುವ ಯಾರೇ ಆಗಲಿ ಅಲ್ಲಿರಲು ಸಾಧ್ಯವೇ ಇಲ್ಲ’ ಎಂದರು.

ADVERTISEMENT

‘2001ಕ್ಕಿಂತಲೂ ಮುನ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರು ಟಿಎಂಸಿಗೆ ಆಶ್ರಯ ನೀಡಿರದಿದ್ದರೆ ಇಂದು ಆ ಪಕ್ಷಕ್ಕೆ ಅಸ್ತಿತ್ವವೇ ಇರುತ್ತಿರಲಿಲ್ಲ. 2007ರಲ್ಲಿ ನಂದಿಗ್ರಾಮದಲ್ಲಿ ನಡೆದ ಭೂ ಆಂದೋಲನದಲ್ಲಿ ಪ್ರಾಣ ಕಳೆದುಕೊಂಡವರ ಶವಗಳನ್ನು ಮೆಟ್ಟಿಲುಗಳಂತೆ ಬಳಸಿ ಅವರು ಮುಖ್ಯಮಂತ್ರಿಯಾದರು’ ಎಂದು ಮಮತಾ ಬ್ಯಾನರ್ಜಿ ಅವರ ಹೆಸರು ಉಲ್ಲೇಖಿಸದೇ ಸುವೆಂದು, ಟಿಎಂಸಿ ಮುಖ್ಯಸ್ಥರ ವಿರುದ್ಧ ಟೀಕಾ ಪ್ರಹಾರ ಮಾಡಿದರು.

‘ನಂದಿಗ್ರಾಮದ ಆಂದೋಲದನಲ್ಲಿ ಮಡಿದವರ ಶವಗಳನ್ನು ಮೆಟ್ಟಿಲುಗಳಂತೆ ಬಳಸಿ ನೀವು ಮುಖ್ಯಮಂತ್ರಿಯಾಗಿದ್ದೀರಿ ಎಂದು ನಾನು ಟಿಎಂಸಿ ಮುಖ್ಯಸ್ಥೆಗೆ ಹೇಳಲು ಬಯಸುತ್ತೇನೆ. ಅಂದು ಕಾಂಗ್ರೆಸ್‌ನಿಂದ ದೂರವಾಗುವ ಮೂಲಕ ಟಿಎಂಸಿಯನ್ನು ಸ್ಥಾಪಿಸಿದಿರಿ. ಆದರೆ, 2011ರ ವಿಧಾನಸಭಾ ಚುನಾವಣೆಯಲ್ಲಿ ಅದೇ ಕಾಂಗ್ರೆಸ್ ಜೊತೆಗೆ ಕೈಜೋಡಿಸಿದ್ದೀರಿ’ ಎಂದು ವಾಗ್ದಾಳಿ ನಡೆಸಿದರು.

‘ಬಿಜೆಪಿ ಪರ ಮತ ಚಲಾಯಿಸಿ. ಒಂದು ವೇಳೆ ನಿಮಗೆ ಬಿಜೆಪಿಗೆ ಮತ ಹಾಕಲು ಸಾಧ್ಯವಾಗದಿದ್ದಲ್ಲಿ ಕಮ್ಯುನಿಸ್ಟ್ ಆಡಳಿತವನ್ನು ಕೊನೆಗಾಣಿಸಲು ಮಮತಾ ಬ್ಯಾನರ್ಜಿ ಅವರಿಗಾದರೂ ಮತ ಹಾಕಿ ಎಂದು ಬಿಜೆಪಿ ನಾಯಕರು ಹೇಳಿದ್ದರು. 2011ರಲ್ಲಿ ಬಂಗಾಳದಲ್ಲಿ ಬದಲಾವಣೆ ತರುವ ವಿಚಾರದಲ್ಲಿ ಬಿಜೆಪಿಯದ್ದೂ ಕೊಡುಗೆ ಇದೆ’ ಎಂದು ಸುವೆಂದು ಹೇಳಿದರು.

ಸುವೆಂದು ಹೇಳಿಕೆಗೆ ಪ್ರತಿಕ್ರಿಯಿಸಿರುವ ಟಿಎಂಸಿಯ ಸಂಸದ ಸೌಗತ ರಾಯ್ ‘ಸುವೆಂದು ಇಷ್ಟು ಕೆಳಮಟ್ಟಕ್ಕೆ ಇಳಿಯಬಹುದೆಂದು ನಾನು ನಿರೀಕ್ಷಿಸಿರಲಿಲ್ಲ. ಜನರು ಅವರನ್ನು ಎಂದಿಗೂ ಕ್ಷಮಿಸಲಾರರು’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.