ADVERTISEMENT

ಗೌರಿ ಲಂಕೇಶ್‌ ಹತ್ಯೆ ಆರೋಪಿಗೆ ಯಾವುದೇ ಹುದ್ದೆ ಇಲ್ಲ: ಶಿವಸೇನಾ ಶಿಂದೆ ಬಣ

ಪಿಟಿಐ
Published 20 ಅಕ್ಟೋಬರ್ 2024, 11:13 IST
Last Updated 20 ಅಕ್ಟೋಬರ್ 2024, 11:13 IST
<div class="paragraphs"><p>ಗೌರಿ ಲಂಕೇಶ್ ಮತ್ತು&nbsp;ಶ್ರೀಕಾಂತ್ ಪಾಂಗಾರ್ಕರ್</p></div>

ಗೌರಿ ಲಂಕೇಶ್ ಮತ್ತು ಶ್ರೀಕಾಂತ್ ಪಾಂಗಾರ್ಕರ್

   

ಚಿತ್ರಕೃಪೆ: ‘ಎಕ್ಸ್‌’

ಮುಂಬೈ: ಪತ್ರಕರ್ತೆ, ಹೋರಾಟಗಾರ್ತಿ ಗೌರಿ ಲಂಕೇಶ್‌ ಹತ್ಯೆಯ ಆರೋಪಿ ಶ್ರೀಕಾಂತ್‌ ಪಾಂಗಾರ್ಕರ್‌ ಅವರನ್ನು ಜುಲ್ನಾ ಕ್ಷೇತ್ರದಲ್ಲಿ ಪಕ್ಷದ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಿರುವುದನ್ನು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಭಾನುವಾರ ತಡೆಹಿಡಿದಿದ್ದಾರೆ.

ADVERTISEMENT

ಗೌರಿ ಲಂಕೇಶ್‌ ಅವರ ಹತ್ಯೆ ಹಾಗೂ ನಾಲಸೊಪಾರಾ ಶಸ್ತ್ರಾಸ್ತ್ರ ಪ್ರಕರಣದ ಆರೋಪಿ ಶ್ರೀಕಾಂತ್‌ ಪಾಂಗಾರ್ಕರ್‌ ಅವರು ಶಿವಸೇನಾ (ಶಿಂದೆ ಬಣ) ಸೇರ್ಪಡೆಗೊಂಡಿರುವುದು ಚುನಾವಣೆ ನಡೆಯುತ್ತಿರುವ ಈ ಹೊತ್ತಿನಲ್ಲಿ ರಾಜ್ಯದಲ್ಲಿ ಪ್ರಮುಖ ರಾಜಕೀಯ ಚರ್ಚಾ ವಿಷಯವಾಗಿದೆ. 

ಜುಲ್ನಾ ಪ್ರಾಂತ್ಯದ ಶಿನಸೇನಾ ನಾಯಕ ಅಜಯ್‌ ಕೋಟ್ಕರ್‌ ಅವರ ಸಮ್ಮುಖದಲ್ಲಿ ಶ್ರೀಕಾಂತ್‌ ಅವರು ಶುಕ್ರವಾರ ಪ‌ಕ್ಷ ಸೇರಿದ್ದರು. ‘ಮಾಜಿ ಶಿವಸೈನಿಕರಾದ ಶ್ರೀಕಾಂತ್‌ ಅವರು ಪಕ್ಷಕ್ಕೆ ಮರಳಿದ್ದಾರೆ. ಇವರನ್ನು ಜುಲ್ನಾ ಕ್ಷೇತ್ರದ ಪ್ರಚಾರ ಸಮಿತಿಯ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಗಿದೆ’ ಎಂದು ಅಜಯ್‌ ಅವರು ಹೇಳಿಕೆ ನೀಡಿದ್ದರು.

ಇದರಿಂದಾಗಿ ಶಿವಸೇನಾವು ತೀವ್ರ ಟೀಕೆಗೆ ಗುರಿಯಾಗಿತ್ತು. ‘ಒಂದು ವೇಳೆ ಶ್ರೀಕಾಂತ್‌ ಅವರಿಗೆ ಪಕ್ಷದಲ್ಲಿ ಯಾವುದಾದರೂ ಸ್ಥಾನ ನೀಡಿದ್ದರೆ ಅದನ್ನು ತಕ್ಷಣದಿಂದಲೇ ತಡೆಹಿಡಿಯಬೇಕು’ ಎಂದು ಮುಖ್ಯಮಂತ್ರಿ ಏಕನಾಥ ಶಿಂದೆ ಅವರು ಸೂಚಿಸಿದ್ದಾರೆ. ಆದರೆ, ಶ್ರೀಕಾಂತ್‌ ಅವರು ಪಕ್ಷದ ಸದಸ್ಯರಾಗಿ ಮುಂದುವರಿಯಲಿದ್ದಾರೆಯೇ ಇಲ್ಲವೇ ಎನ್ನುವುದನ್ನು ಮಾತ್ರ ಶಿವಸೇನಾ ಸ್ಪಷ್ಟಪಡಿಸಿಲ್ಲ.

ಜುಲ್ನಾ ಕ್ಷೇತ್ರದಿಂದ ಸ್ಪರ್ಧಿಸುವ ಇಂಗಿತವನ್ನು ಶ್ರೀಕಾಂತ್‌ ಇತ್ತೀಚೆಗೆ ವ್ಯಕ್ತಪಡಿಸಿದ್ದರು. ಆದರೆ, ‘ಮಹಾಯುತಿ’ಯಲ್ಲಿ ಸೀಟು ಹಂಚಿಕೆ ಪ್ರಕ್ರಿಯೆ ಪೂರ್ಣಗೊಳ್ಳದ ಕಾರಣ, ಶ್ರೀಕಾಂತ್‌ ಅವರಿಗೆ ಟಿಕೆಟ್‌ ನೀಡುವ ಕುರಿತು ಇದುವರೆಗೂ ನಿರ್ಧಾರವಾಗಿಲ್ಲ.

ಶ್ರೀಕಾಂತ್‌ ಅವರು 2001ರಿಂದ 2006ರವರೆಗೆ ಶಿವಸೇನಾದಿಂದ ಜುಲ್ನಾ ಪುರಸಭೆಯ ಕೌನ್ಸಿಲರ್‌ ಆಗಿದ್ದರು. 2011ರ ಚುನಾವಣೆಯಲ್ಲಿ ಅವರಿಗೆ ಪಕ್ಷದ ಟಿಕೆಟ್‌ ನಿರಾಕರಿಸಲಾಗಿತ್ತು. ಆ ಬಳಿಕ ಅವರು ‘ಹಿಂದೂ ಜನಜಾಗೃತಿ ಸಮಿತಿ’ಯನ್ನು ಸೇರಿಕೊಂಡಿದ್ದರು. 2018ರಲ್ಲಿ ಗೌರಿ ಲಂಕೇಶ್ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದ್ದ ಇವರು, 2024ರ ಸೆ.4ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.