ನವದೆಹಲಿ: ಪಂಜಾಬ್ ರಾಜ್ಯಪಾಲರಿಗಿರುವ ಚಂಡೀಗಡದ ಆಡಳಿತಾಧಿಕಾರಿಯ ಜವಾಬ್ದಾರಿಯನ್ನು ಹಿಂತೆಗೆದುಕೊಳ್ಳುವ ಯಾವುದೇ ಪ್ರಸ್ತಾವ ಕೇಂದ್ರ ಸರ್ಕಾರದ ಮುಂದಿಲ್ಲ ಎಂದು ಕೇಂದ್ರ ಗೃಹ ಸಚಿವಾಲಯ ಶುಕ್ರವಾರ ಸ್ಪಷ್ಟಪಡಿಸಿದೆ.
ಶಿರೋಮಣಿ ಅಕಾಲಿದಳದ ಅಧ್ಯಕ್ಷ ಸುಖ್‌ಬೀರ್ ಸಿಂಗ್ ಬಾದಲ್ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ವಿಚಾರ ಪ್ರಸ್ತಾಪಿಸಿದ್ದಾರೆ ಎನ್ನುವುದನ್ನು ಗೃಹ ಸಚಿವಾಲಯ ನಿರಾಕರಿಸಿದ್ದು, ಚಂಡೀಗಡದ ಆಡಳಿತಾಧಿಕಾರಿಯ ಜವಾಬ್ದಾರಿಯನ್ನು ಹಿಂತೆಗೆದುಕೊಳ್ಳುವ ಆತಂಕವು ಆಧಾರರಹಿತ ಎಂದಿದೆ.
ಗುರುವಾರ ಸರಣಿ ಟ್ವೀಟ್ ಮಾಡಿರುವ ಬಾದಲ್, ಪಂಜಾಬ್ ರಾಜ್ಯಪಾಲರನ್ನು ಉಸ್ತುವಾರಿ ಮಾಡುವ ಮೂಲಕ ಚಂಡೀಗಡಕ್ಕೆ ಪೂರ್ಣ ಪ್ರಮಾಣದ ಆಡಳಿತಾಧಿಕಾರಿಯನ್ನು ನೇಮಿಸುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಪರಿಶೀಲಿಸುವಂತೆ ಅಮಿತ್ ಶಾ ಅವರನ್ನು ವಿನಂತಿಸಲಾಗಿದೆ ಎಂದು ಹೇಳಿದ್ದಾರೆ.
ಬಾದಲ್ ಟ್ವೀಟ್‌ನಲ್ಲಿ ವ್ಯಕ್ತಪಡಿಸಿರುವ ಆತಂಕವು ಆಧಾರರಹಿತವಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
‘ಪಂಜಾಬ್ ರಾಜ್ಯಪಾಲರನ್ನು ಚಂಡೀಗಡದ ಆಡಳಿತಾಧಿಕಾರಿ ಜವಾಬ್ದಾರಿಯಿಂದ ಬಿಡುಗಡೆಗೊಳಿಸುವ ಯಾವುದೇ ನಿರ್ಧಾರವನ್ನು ಕೇಂದ್ರ ಸರ್ಕಾರ ತೆಗೆದುಕೊಂಡಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ; ಅಂತಹ ಯಾವುದೇ ಪ್ರಸ್ತಾಪವೂ ಕೇಂದ್ರದ ಮುಂದಿಲ್ಲ. ಸುಖಬೀರ್ ಸಿಂಗ್ ಬಾದಲ್ ಅವರು ಈ ವಿಷಯವನ್ನೂ ಕೇಂದ್ರ ಗೃಹ ಸಚಿವರ ಎದುರು ಪ್ರಸ್ತಾಪಿಸಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ’ ಎಂದು ವಕ್ತಾರರು ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.