ಲಖನೌ: ಉತ್ತರ ಪ್ರದೇಶದ ಕಾರಾಗೃಹದಲ್ಲಿ ಕಳೆದ ತಿಂಗಳು ಮೃತಪಟ್ಟ ಗ್ಯಾಂಗ್‌ಸ್ಟರ್ ಮತ್ತು ಮಾಜಿ ಶಾಸಕ ಮುಖ್ತಾರ್ ಅನ್ಸಾರಿ ಅವರ ಕರುಳಿನಲ್ಲಿ ವಿಷಕಾರಿ ಅಂಶ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಬುಧವಾರ ಹೇಳಿದ್ದಾರೆ.
‘ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನಮಗೆ ತಲುಪಿದ್ದು, ಅನ್ಸಾರಿ ಕರುಳಿನಲ್ಲಿ ಯಾವುದೇ ರೀತಿಯ ವಿಷದ ಅಂಶ ಕಂಡುಬಂದಿಲ್ಲ. ಬಾಂಡಾ ಹೆಚ್ಚುವರಿ ಮುಖ್ಯನ್ಯಾಯಧೀಶರ ನೇತೃತ್ವದಲ್ಲಿ ನಡೆಯುತ್ತಿರುವ ತನಿಖಾ ಸಮಿತಿಗೆ ಈ ವರದಿಯನ್ನು ಸಲ್ಲಿಸಲಾಗುವುದು’ ಎಂದು ಹಿರಿಯ ಅಧಿಕಾರಿಯೊಬ್ಬರು ಬುಧವಾರ ತಿಳಿಸಿದರು.
ಈ ವರದಿಯ ಕುರಿತು ಪ್ರತಿಕ್ರಿಯಿಸಿದ ಅನ್ಸಾರಿಯ ಸೋದರ ಅಫ್ಜಲ್, ‘ಮರಣೋತ್ತರ ಪರೀಕ್ಷೆ ಅಥವಾ ಕರುಳಿನ ವರದಿಗಳನ್ನು ನಾವು ನಂಬುವುದಿಲ್ಲ’ ಎಂದು ಹೇಳಿದರು.
‘ಕಾರಾಗೃಹದಲ್ಲಿ ಅನ್ಸಾರಿ ಅವರ ಸಾವಿಗೆ ನಿಧಾನಗತಿಯ ವಿಷಕಾರಿ ಅಂಶವೇ ಕಾರಣ’ ಎಂದು ಅನ್ಸಾರಿ ಕುಟುಂಬಸ್ಥರು ದೂರಿದ್ದರು.
ಮಾರ್ಚ್ 28ರಂದು ಬಾಂದಾ ಕಾರಾಗೃಹದಲ್ಲಿ ಮೃತಪಟ್ಟ ಅನ್ಸಾರಿ ಸಾವಿಗೆ ರಕ್ತನಾಳದ ಬಾಗುವಿಕೆ ಅಥವಾ ಹೃದಯಘಾತದಿಂದ ಮೃತಪಟ್ಟಿರಬಹುದು ಎಂದು ಮರಣೋತ್ತರ ಪರೀಕ್ಷೆಯಲ್ಲಿ ತಿಳಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.