ದಿಸ್ಪುರ್: ಹೊರ ರಾಜ್ಯಗಳಿಗೆ ಪ್ರಯಾಣ ಬೆಳೆಸುವ ಯಾವುದೇ ವ್ಯಕ್ತಿಯು 96 ಗಂಟೆಯೊಳಗೆ ವಾಪಸ್ ಆದರೆ 10 ದಿನಗಳ ಕ್ವಾರಂಟೈನ್‌ನಲ್ಲಿ ಇರಬೇಕಾಗಿಲ್ಲ ಎಂದು ಅಸ್ಸಾಂ ಸರ್ಕಾರ ತಿಳಿಸಿದೆ.
‘ಕೇಂದ್ರ ಸರ್ಕಾರವು ಹಂತಹಂತವಾಗಿ ಲಾಕ್‌ಡೌನ್ ತೆರವುಗೊಳಿಸುವುದರ (ಅನ್‌ಲಾಕ್–4) ಭಾಗವಾಗಿ ಅಸ್ಸಾಂ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ. ರಾಜ್ಯದಿಂದ ಹೊರಗಿನ ಯಾವುದೇ ಪ್ರದೇಶಕ್ಕೆ ತೆರಳುವ ವ್ಯಕ್ತಿಯು, ತಾನು ರಾಜ್ಯದಿಂದ ಹೊರನಡೆದ ಸಮಯದಿಂದ 96 ಗಂಟೆಯೊಳಗಾಗಿ ವಾಪಸ್ಸಾದರೆ, ಅಂತಹವರು ಹತ್ತು ದಿನಗಳ ಕಾಲ ಕ್ವಾರಂಟೈನ್‌ನಲ್ಲಿ ಇರುವ ಅಗತ್ಯವಿಲ್ಲ’ ಎಂದು ಪ್ರಕಟಣೆ ಹೊರಡಿಸಿದೆ.
ಆದಾಗ್ಯೂ ವಾಪಸ್ ಆದ ಬಳಿಕ ವ್ಯಕ್ತಿಯು ರ‌್ಯಾಪಿಡ್ ಆ್ಯಂಟಿಜೆನ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಪರೀಕ್ಷೆ ವರದಿ ಪಾಸಿಟಿವ್ ಬಂದರೆ, ಮನೆಯಲ್ಲಿಯೇ ಪ್ರತ್ಯೇಕವಾಸದಲ್ಲಿ ಉಳಿದು ಕೋವಿಡ್–19 ಮಾರ್ಗಸೂಚಿಯಂತೆ ಚಿಕಿತ್ಸೆ ಪಡೆಯಬೇಕು ಎಂದು ಸೂಚಿಸಲಾಗಿದೆ.
ಮುಂದುವರಿದು, ಒಂದುವೇಳೆ ಪರೀಕ್ಷೆಯ ವರದಿಯಲ್ಲಿ ನೆಗೆಟಿವ್ ಬಂದರೆ, ಆರ್‌ಟಿ–ಪಿಸಿಆರ್ (ರಿವರ್ಸ್ ಟ್ರಾನ್ಸ್‌ಕ್ರಿಪ್ಷನ್-ಪಾಲಿಮರೇಸ್ ಚೈನ್ ರಿಯಾಕ್ಷನ್) ಪರೀಕ್ಷೆ ಮಾಡಿಸಿಕೊಳ್ಳಬೇಕು. ಅದರ ವರದಿ ಬರುವವರೆಗೆ ಪ್ರತ್ಯೇಕವಾಸದಲ್ಲಿರಬೇಕು. ಅದರಲ್ಲಿಯೂ ನೆಗೆಟಿವ್ ಬಂದರೆ ಕ್ವಾರಂಟೈನ್‌ನ ಅಗತ್ಯವಿರುವುದಿಲ್ಲ ಎಂದು ಹೇಳಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮಾಹಿತಿ ಪ್ರಕಾರ, ರಾಜ್ಯದಲ್ಲಿ ಇದುವರೆಗೆ ಒಟ್ಟು 29,690 ಸಕ್ರಿಯ ಪ್ರಕರಣಗಳಿವೆ. 1,05,701 ಸೋಂಕಿತರು ಗುಣಮುಖರಾಗಿದ್ದು, 414 ಮಂದಿ ಮೃತಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.