ADVERTISEMENT

ಇಂದಿರಾ ಅಂತ್ಯಕ್ರಿಯೆ:ರಾಜೀವ್‌,ರಾಹುಲ್‌ ಇಸ್ಲಾಂ ಧರ್ಮ ಪಾಲನೆ–ಇದು ಸುಳ್ಳು ಸುದ್ದಿ

ಏಜೆನ್ಸೀಸ್
Published 3 ಫೆಬ್ರುವರಿ 2019, 10:35 IST
Last Updated 3 ಫೆಬ್ರುವರಿ 2019, 10:35 IST
ವೈರಲ್ ಆಗಿದ್ದ ಚಿತ್ರ
ವೈರಲ್ ಆಗಿದ್ದ ಚಿತ್ರ   

ಬೆಂಗಳೂರು: ಇಂದಿರಾಗಾಂಧಿ ಅಂತ್ಯಕ್ರಿಯೆಯಲ್ಲಿ ರಾಜೀವ್‌ ಗಾಂಧಿ ಮತ್ತು ರಾಹುಲ್‌ ಗಾಂಧಿ ಇಸ್ಲಾಂ ಸಂಪ್ರದಾಯ ಆಚರಿಸಿದ್ದಾರೆ ಎಂದು ಸಾರುವ ಚಿತ್ರವೊಂದು ಇತ್ತೀಚೆಗೆ ವೈರಲ್‌ ಆಗಿತ್ತು.

‘ರಾಜೀವ್‌ ಗಾಂಧಿ ಮತ್ತು ರಾಹುಲ್‌ ಗಾಂಧಿಯೂ ಇಂದಿರಾ ದೇಹದ ಬಳಿ ನಿಂತು ಕಲ್ಮಾ (ಶ್ಲೋಕ) ಪಠಿಸಿದ್ದಾರೆ. ಹೀಗಿದ್ದೂ ನಮ್ಮ ದೇಶದ ಜನ ಇವರನ್ನು ಬ್ರಾಹ್ಮಣರೆಂದು ಹೇಳುತ್ತಾರೆ’ ಎಂಬ ಅಡಿಬರಹದೊಂದಿದೆಬಿಜೆಪಿ ಕಾರ್ಯಕರ್ತ ಮನೋಜ್‌ ಕುಮಾರ್‌ ರಾಣಾ ಎಂಬುವವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪ್ರಕಟಿಸಿಕೊಂಡಿದ್ದ ಈ ಫೋಟೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು.

ಇಂದಿರಾ ಮೃತದೇಹ ಎಂಬ ಸ್ಪಷ್ಟತೆ ಚಿತ್ರದಲ್ಲಿ ಇಲ್ಲ

ADVERTISEMENT

ಈ ಚಿತ್ರದ ಹಿಂದಿನ ಕಥೆಯನ್ನು ಕೆದಕಿದ ಆಲ್ಟ್‌ ನ್ಯೂಸ್‌ಗೆ ದೊರೆತದ್ದು, ಅದು ಇಂದಿರಾ ಗಾಂಧಿ ಅವರ ಮೃತದೇಹ ಅಲ್ಲ ಎಂಬ ಸತ್ಯ.ಅಷ್ಟಕ್ಕೂ ಆ ಚಿತ್ರದಲ್ಲಿರುವುದು ಯಾರು ಗೊತ್ತಾ? ದಕ್ಷಿಣ ಆಫ್ಘಾನಿಸ್ತಾನದ ಪಠಾಣ್‌ ಸಮುದಾಯದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಸಾಮಾಜಿಕ ಕಾರ್ಯಕರ್ತ ಅಬ್ದಲ್‌ ಗಫರ್‌ ಖಾನ್‌ ಅವರದ್ದು. ಬಚ್ಚ ಖಾನ್‌ ಎಂದೇ ಅವರು ಪ್ರಸಿದ್ಧರು. ರಾಜೀವ್‌ ಗಾಂಧಿ ಮತ್ತು ರಾಹುಲ್‌ ಗಾಂಧಿ ಅವರ ಅಂತ್ಯಕ್ರಿಯೆ ಪಾಲ್ಗೊಂಡು ಅಂತಿಮ ನಮನ ಸಲ್ಲಿಸಿದ ದೃಶ್ಯವದು.

2016ರಲ್ಲಿ ಸ್ಕೈಸ್ಕ್ರಾಪರ್‌ಸಿಟಿ ಎಂಬ ವೆಬ್‌ಸೈಟ್‌ ಸಹ ಆ ಛಾಯಚಿತ್ರವನ್ನು ಪೇಶ್ವೆಯಲ್ಲಿ ನಡೆದ ಬಚ್ಚ ಖಾನ್‌ ಅವರ ಅಂತ್ಯಸಂಸ್ಕಾರದ ದೃಶ್ಯ ಎಂದೇ ಗುರುತಿಸಿತ್ತು. ಬಚ್ಚಖಾನ್‌ 1988ರ ಜನವರಿ 20ರಂದು ಕೊನೆಯುಸಿರೆಳೆದಿದ್ದರು. ಇದನ್ನು ವರದಿ ಮಾಡಿದ್ದ ನ್ಯೂಯಾರ್ಕ್‌ ಟೈಮ್ಸ್‌, ‘ಖಾನ್‌ ಅವರಿಗೆ ಗೌರವ ಸಲ್ಲಿಸಲು ಭಾರತದ ಪ್ರಧಾನಿ ರಾಜೀವ್‌ ಗಾಂಧಿ ಪೇಶ್ವೆಗೆ ಭೇಟಿ ನೀಡಿದ್ದರು’ ಎಂದು ಅದರಲ್ಲಿ ಉಲ್ಲೇಖಿಸಿತ್ತು. ಔಟ್‌ಲುಕ್‌ ಸಹ ರಾಜೀವ್‌ ಭೇಟಿಯ ಬಗ್ಗೆ ವರದಿ ಮಾಡಿತ್ತು.

ಎರಡೂ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ರಾಹುಲ್‌ ಗಾಂಧಿಗೆ ಎಷ್ಟು ವಯಸ್ಸು ಎಂಬುದನ್ನು ಗಮನಿಸಿದಾಗಲೂ ವ್ಯತ್ಯಾಸ ಕಂಡುಬರುತ್ತದೆ. ಇಂದಿರಾ ಗಾಂಧಿ ಮೃತಪಟ್ಟಾಗ ರಾಹುಲ್‌ಗೆ 14 ವರ್ಷ. ಇನ್ನು ಗಫರ್‌ ಸತ್ತಾಗ ರಾಹುಲ್‌ಗೆ 18 ವರ್ಷವಾಗಿತ್ತು. ಕಾಂಗ್ರೆಸ್‌ ಅಧ್ಯಕ್ಷ ತಮ್ಮ ಅಜ್ಜಿಯ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡ ಸಾಕಷ್ಟು ಛಾಯಚಿತ್ರಗಳು ನಮಗೆ ದೊರೆಯುತ್ತವೆ. ವೈರಲ್‌ ಚಿತ್ರದಲ್ಲಿರುವುದಕ್ಕಿಂತ ಅದರಲ್ಲಿ ರಾಹುಲ್‌ ಚಿಕ್ಕವರಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ.

ಇಂದಿರಾ ಅಂತ್ಯಕ್ರಿಯೆ ನಡೆದದ್ದು, ಹಿಂದೂ ಸಂಪ್ರದಾಯದಂತೆ

ಮಾಜಿ ಪ್ರಧಾನಿ ಇಂದಿರಾ ಗಾಂಧಿ 1984ರ ಅಕ್ಟೋಬರ್‌ 31ರಂದು ಹತ್ಯೆಗೊಂಡಿದ್ದಾರೆ. ಅವರ ಕುಟುಂಬ ಹಿಂದೂ ಸಂಪ್ರದಾಯದಂತೆಯೇ ಅವರ ಅಂತ್ಯಸಂಸ್ಕಾರ ನೆರವೇರಿಸಿದೆ. 1984ರ ನವೆಂಬರ್‌ 4ರಂದು ವಾಷಿಂಗ್ಟನ್‌ ಪೋಸ್ಟ್‌ ಪ್ರಕಟಿಸಿದ್ದ ವರದಿಯಲ್ಲಿ ‘ಬ್ರಾಹ್ಮಣ ಪಂಡಿತರು ವೇದಿಕ ಮಂತ್ರ ಘೋಷಿಸುತ್ತಿದ್ದರು, 10 ಅಡಿ ಎತ್ತರದ ಚಿತೆಯನ್ನು ಏರಿದ ಕುಟುಂಬದ ಸದಸ್ಯರು ಇಂದಿರಾ ಅವರ ದೇಹಕ್ಕೆ ಅಗ್ನಿ ಸ್ಪರ್ಶ ಮಾಡಿದರು’ ಎಂದು ಇಂದಿರಾ ಅಂತ್ಯಸಂಸ್ಕಾರದ ಬಗ್ಗೆ ವಿವರಿಸಲಾಗಿದೆ.

ಅಮೆರಿಕದ ಸ್ಟಾಕ್‌ ಫೋಟೊ ಏಜೆನ್ಸಿಯಾದಜೆಟ್ಟಿ ಇಮೇಜಸ್‌ನ ಛಾಯಚಿತ್ರಗ್ರಾಹಕರು ಅಂತ್ಯಸಂಸ್ಕಾರದ ವೇಳೆ ಸೆರೆಹಿಡಿದಿದ್ದ ಚಿತ್ರಗಳನ್ನು ಗಮನಿಸಿದಾಗ, ರಾಜೀವ್‌, ಸೋನಿಯಾ, ರಾಹುಲ್ ಮತ್ತು ಪ್ರಿಯಾಂಕ ಗಾಂಧಿ ಇಂದಿರಾ ಅವರ ಚಿತೆಯ ಎದುರು ನಿಂತು ಹಿಂದೂ ಸಂಪ್ರದಾಯಗಳ ಪ್ರಕಾರ ಅಂತಿಮ ವಿಧಿವಿಧಾನಗಳನ್ನು ನಡೆಸಿದರು ಎನ್ನುವುದು ತಿಳಿಯುತ್ತದೆ.

ಈ ಎಲ್ಲಾ ಸಾಕ್ಷ್ಯಗಳ ಆಧಾರ ಮೇಲೆ ಇಂದಿರಾ ಗಾಂಧಿ ಅವರ ಅಂತ್ಯಸಂಸ್ಕಾರ ಹಿಂದೂ ಸಂಪ್ರದಾಯದಂತೆಯೇ ನಡೆದಿದ್ದು, ಅವರ ಕುಟುಂಬದವರು ಇಸ್ಲಾಮಿಕ್‌ ಸಂಪ್ರದಾಯ ಆಚರಿಸಿಲ್ಲ ಎನ್ನುವುದು ತಿಳಿಯುತ್ತದೆ. ಹಾಗೆಯೇ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಸುಳ್ಳು ಎನ್ನುವುದು ಸ್ಪಷ್ಟವಾಗುತ್ತದೆ. ಈ ಚಿತ್ರ ಮೋದಿ ಪರರ ವಾಟ್ಸ್ಆ್ಯಪ್‌ ಗುಂಪಿನಲ್ಲಿ ಸಾಕಷ್ಟು ವಿನಿಮಯಗೊಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.