ADVERTISEMENT

ಅಲಿಗಢ ಮುಸ್ಲಿಂ ವಿ.ವಿ.: ಮುಸ್ಲಿಮರಿಗೆ ಮೀಸಲಾತಿ ಇಲ್ಲ

ಪಿಟಿಐ
Published 12 ನವೆಂಬರ್ 2024, 12:35 IST
Last Updated 12 ನವೆಂಬರ್ 2024, 12:35 IST
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ದ್ವಾರ –ಪಿಟಿಐ ಸಂಗ್ರಹ ಚಿತ್ರ
ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ದ್ವಾರ –ಪಿಟಿಐ ಸಂಗ್ರಹ ಚಿತ್ರ   

ಅಲಿಗಢ: ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದಲ್ಲಿ (ಎಎಂಯು) ಉದ್ಯೋಗದಲ್ಲಿ ಮತ್ತು ವಿವಿಧ ಕೋರ್ಸ್‌ಗಳಿಗೆ ಪ್ರವೇಶ ಕಲ್ಪಿಸುವಾಗ ಧರ್ಮದ ಆಧಾರದಲ್ಲಿ ಮುಸ್ಲಿಮರಿಗೆ ಮೀಸಲಾತಿ ನೀಡಲಾಗುತ್ತಿದೆ ಎಂಬ ಮಾತುಗಳನ್ನು ವಿಶ್ವವಿದ್ಯಾಲಯವು ಅಲ್ಲಗಳೆದಿದೆ. ಆ ರೀತಿಯಲ್ಲಿ ಮೀಸಲಾತಿ ನೀಡುವ ವ್ಯವಸ್ಥೆ ತನ್ನಲ್ಲಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

‘ಎಎಂಯು’ವಿನ ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆ ಸ್ಥಾನದ ಕುರಿತು ಹೊಸ ನ್ಯಾಯಪೀಠ ನಿರ್ಣಯಿಸಲಿದೆ ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿದ ಕೆಲವೇ ದಿನಗಳಲ್ಲಿ ವಿಶ್ವವಿದ್ಯಾಲಯವು ಈ ಸ್ಪಷ್ಟನೆ ನೀಡಿದೆ.

‘ಕೆಲವು ಮಾಧ್ಯಮಗಳಲ್ಲಿ ವರದಿಯಾಗಿರುವಂತೆ, ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯವು ಮುಸ್ಲಿಂ ಅಭ್ಯರ್ಥಿಗಳಿಗೆ ವಿವಿಧ ಕೋರ್ಸ್‌ಗಳಿಗೆ ಪ್ರವೇಶದಲ್ಲಿ ಅಥವಾ ನೇಮಕಾತಿಯಲ್ಲಿ ಮೀಸಲಾತಿ ನೀಡುವುದಿಲ್ಲ’ ಎಂದು ವಿಶ್ವವಿದ್ಯಾಲಯದ ಸಾರ್ವಜನಿಕ ಸಂಪರ್ಕ ಕಚೇರಿಯ ಪ್ರೊ. ಮೊಹಮ್ಮದ್ ಆಸಿಂ ಸಿದ್ದಿಕಿ ಹೇಳಿದ್ದಾರೆ.

ADVERTISEMENT

‘ನಮ್ಮ ವಿಶ್ವವಿದ್ಯಾಲಯವು ನಡೆಸುವ ಶಾಲೆಗಳಿಂದ ಬರುವ ವಿದ್ಯಾರ್ಥಿಗಳಿಗಾಗಿ ಎಎಂಯು ಆಂತರಿಕ ಕೋಟಾ ವ್ಯವಸ್ಥೆ ಹೊಂದಿದೆ. ಈ ವಿದ್ಯಾರ್ಥಿಗಳು ಎಎಂಯುನಲ್ಲಿ ಪ್ರವೇಶ ಕೋರಿದಾಗ, ಅವರು ಯಾವುದೇ ಧರ್ಮಕ್ಕೆ ಸೇರಿರಲಿ ಅವರಿಗೆ ಶೇಕಡ 50ರಷ್ಟು ಸೀಟುಗಳನ್ನು ಮೀಸಲಾಗಿ ಇಡಲಾಗುತ್ತದೆ’ ಎಂದು ಪ್ರಕಟಣೆಯಲ್ಲಿ ಅವರು ಹೇಳಿದ್ದಾರೆ.

ನವೆಂಬರ್ 9ರಂದು ನಡೆದ ರ್‍ಯಾಲಿಯೊಂದರಲ್ಲಿ ಮಾತನಾಡಿದ್ದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು, ‘ದೇಶದ ಸಂಪನ್ಮೂಲಗಳಿಂದ ಬೆಳೆದ, ಜನರ ತೆರಿಗೆ ಹಣದಲ್ಲಿ ನಡೆಯುವ ಸಂಸ್ಥೆಯೊಂದು, ಹಿಂದುಳಿದ ವರ್ಗದವರಿಗೆ, ಪರಿಶಿಷ್ಟ ಜಾತಿಗಳಿಗೆ, ಬುಡಕಟ್ಟು ಸಮುದಾಯಗಳಿಗೆ ಮೀಸಲಾತಿ ನೀಡುತ್ತಿಲ್ಲ. ಆದರೆ ಅದು ಮುಸ್ಲಿಮರಿಗೆ ಶೇ 50ರಷ್ಟು ಮೀಸಲಾತಿ ಕಲ್ಪಿಸುತ್ತಿದೆ’ ಎಂದು ದೂರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.