ADVERTISEMENT

370ನೇ ವಿಧಿ ಬಗ್ಗೆ ನಿರ್ಣಯವಿಲ್ಲ: ಜಮ್ಮು- ಕಾಶ್ಮೀರ ಸರ್ಕಾರದ ವಿರುದ್ಧ PDP ಕಿಡಿ

ಪಿಟಿಐ
Published 18 ಅಕ್ಟೋಬರ್ 2024, 10:06 IST
Last Updated 18 ಅಕ್ಟೋಬರ್ 2024, 10:06 IST
<div class="paragraphs"><p>ಒಮರ್‌ ಅಬ್ದುಲ್ಲಾ</p></div>

ಒಮರ್‌ ಅಬ್ದುಲ್ಲಾ

   

ಪಿಟಿಐ ಚಿತ್ರ

ಶ್ರೀನಗರ: ಎನ್‌ಸಿ–ಕಾಂಗ್ರೆಸ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರದ ಸರ್ಕಾರವು ತನ್ನ ಮೊದಲ ಸಂಪುಟ ಸಭೆಯಲ್ಲಿ ರಾಜ್ಯ ಸ್ಥಾನಮಾನ ಮರುಸ್ಥಾಪಿಸಲು ಕೇಂದ್ರದ ಮೇಲೆ ಒತ್ತಡ ಹೇರಲು ನಿರ್ಣಯ ಕೈಗೊಂಡಿದ್ದು, 370ನೇ ವಿಧಿಯಡಿ ನೀಡಲಾಗಿದ್ದ ಸ್ಥಾನಮಾನ ಪುನಃಸ್ಥಾಪಿಸುವ ಬಗ್ಗೆ ನಿರ್ಣಯ ಕೈಗೊಳ್ಳದಿರುವ ಕುರಿತಂತೆ ಪ್ರತಿಪಕ್ಷ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ತೀವ್ರ ವಾಗ್ದಾಳಿ ನಡೆಸಿದೆ.

ADVERTISEMENT

ಸಂಪುಟದ ಈ ನಿರ್ಣಯವು, 370ನೇ ವಿಧಿ ಅಡಿಯ ವಿಶೇಷ ಸ್ಥಾನಮಾನ ಹಿಂಪಡೆಯುವ 2019ರ ಕೇಂದ್ರ ಸರ್ಕಾರದ ನಿರ್ಣಯವನ್ನು ಅನುಮೋದಿಸಿದಂತಾಗಿದೆ ಎಂದು ಹೇಳಿದೆ.

ನಿರ್ಣಯವನ್ನು ಗುಟ್ಟಾಗಿ ಇಟ್ಟಿರುವುದೇಕೆ? ಎಂದು ಮತ್ತೊಂದು ರಾಜಕೀಯ ಪಕ್ಷ ಪೀಪಲ್ಸ್ ಕಾನ್ಫರೆನ್ಸ್(ಪಿಸಿ) ಪ್ರಶ್ನಿಸಿದೆ.

ಜಮ್ಮು ಮತ್ತು ಕಾಶ್ಮೀರದ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲು ಕೇಂದ್ರ ಸರ್ಕಾರವನ್ನು ಒತ್ತಾಯಿಸುವ ನಿರ್ಣಯಯವನ್ನು ಸಚಿವ ಸಂಪುಟ ಕೈಗೊಂಡಿದೆ. ಖುದ್ದು ಸಿಎಂ ಒಮರ್ ಅಬ್ದುಲ್ಲಾ ಅವರೇ ದೆಹಲಿಗೆ ತೆರಳಿ ನಿರ್ಣಯದ ಕರಡನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಒಪ್ಪಿಸಲಿದ್ದಾರೆ ಎಂದು ಜಮ್ಮು ಮೂಲದ ದಿನಪತ್ರಿಕೆ ಡೈಲಿ ಎಕ್ಸೆಲರ್ ವರದಿ ಆಧರಿಸಿ ವಿಪಕ್ಷಗಳು ಕಿಡಿಕಾರಿವೆ.

ಆದರೆ, ಈವರೆಗೆ ವರದಿಯನ್ನು ಅಲ್ಲಗಳೆಯುವ ಅಥವಾ ಒಪ್ಪಿಕೊಳ್ಳುವ ಕುರಿತಂತೆ ಸರ್ಕಾರದ ಕಡೆಯಿಂದ ಅಧಿಕೃತ ಸ್ಪಷ್ಟನೆ ಬಂದಿಲ್ಲ.

'ಕೇವಲ ರಾಜ್ಯದ ಸ್ಥಾನಮಾನ ಕುರಿತಂತೆ ಒಮರ್ ಅಬ್ದುಲ್ಲಾ ಅವರ ಮೊದಲ ನಿರ್ಣಯವು 2019ರ ಆಗಸ್ಟ್‌ 5 ರಂದು ಕೇಂದ್ರ ಕೈಗೊಂಡ 370ನೇ ವಿಧಿ ಅಡಿಯ ಸ್ಥಾನಮಾನ ಹಿಂತೆಗೆತ ನಿರ್ಧಾರವನ್ನು ಅನುಮೋದಿಸಿದೆ. 370ನೇ ವಿಧಿ ಅಡಿಯ ಸ್ಥಾನಮಾನ ಮರುಸ್ಥಾಪಿಸುವ ಕುರಿತಂತೆ ಸಂಪುಟ ಯಾವುದೇ ನಿರ್ಣಯ ಕೈಗೊಂಡಿಲ್ಲ. ವಿಶೇಷವಾಗಿ, ಅದೇ ಭರವಸೆ ನೀಡಿ ಸರ್ಕಾರ ಮತ ಪಡೆದು ಅಧಿಕಾರಕ್ಕೆ ಬಂದ ಬಳಿಕವೂ ನಿರ್ಣಯ ಕೈಗೊಳ್ಳದಿರುವುದು ದೊಡ್ಡ ಹಿನ್ನಡೆಯಾಗಿದೆ’ಎಂದು ಪಿಡಿಪಿ ಯುವ ಘಟಕದ ಅಧ್ಯಕ್ಷ ಮತ್ತು ಪುಲ್ವಾಮಾ ಶಾಸಕ ವಹೀದ್ ಪರಾ ಆರೋಪಿಸಿದ್ದಾರೆ.

ಈ ಕುರಿತಂತೆ ಪ್ರತಿಕ್ರಿಯಿಸಿರುವ ಪೀಪಲ್ಸ್ ಕಾನ್ಫರೆನ್ಸ್ ಮುಖ್ಯಸ್ಥ ಸಜಾದ್ ಲೋನ್, ಕೇವಲ ರಾಜ್ಯದ ಸ್ಥಾನಮಾನಕ್ಕಾಗಿ ಮಾತ್ರ ನಿರ್ಣಯ ಕೈಗೊಂಡಿರುವ ಸರ್ಕಾರದ ನಿರ್ಣಯ ಕಂಡು ಆಶ್ಚರ್ಯಚಕಿತನಾಗಿದ್ದೇನೆ, ಒಂದೇ ದಿನಪತ್ರಿಕೆ ಈ ಕುರಿತ ಸುದ್ದಿ ಪ್ರಕಟಿಸಿದ್ದು, ನಿರ್ಣಯದ ಸುತ್ತ ನಿಗೂಢತೆ ಆವರಿಸಿದೆ ಎಂದಿದ್ದಾರೆ.

‘ಮುಖ್ಯ ಕಾರ್ಯದರ್ಶಿಗಳು ಈ ಬಗ್ಗೆ ಅಧಿಸೂಚನೆ ಹೊರಡಿಸಲಿದ್ದಾರೆ ಎಂಬ ಭರವಸೆ ಇದೆ. ಏಕೆಂದರೆ, ಅದು ಶಿಷ್ಟಾಚಾರ’ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಈ ಕುರಿತ ನಿರ್ಣಯವನ್ನು ವಿಧಾನಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕೇ ಹೊರತು, ಸಂಪುಟ ಸಭೆಯಲ್ಲಲ್ಲ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.