ನವದೆಹಲಿ: ಕೋಲ್ಕತ್ತದ ಆರ್.ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಮ್ಮೆ ಪತ್ರ ಬರೆದಿದ್ದಾರೆ.
'ಅತ್ಯಾಚಾರ ಎಸಗಿದ ಅಪರಾಧಿಗಳಿಗೆ ಅತ್ಯಂತ ಕಠಿಣ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಆಗಸ್ಟ್ 22ರಂದು ನಾನು ನಿಮಗೆ ಪತ್ರ ಬರೆದಿದ್ದೆ. ಆದರೆ ಇಂತಹ ಸೂಕ್ಷ್ಮ ವಿಷಯದ ಕುರಿತು ನಿಮ್ಮಿಂದ ಯಾವುದೇ ಉತ್ತರ ಬಂದಿಲ್ಲ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವರು ಮಾತ್ರ ಉತ್ತರಿಸಿದ್ದಾರೆ' ಎಂದಿದ್ದಾರೆ.
ಅತ್ಯಾಚಾರ ಎಸಗಿದ ಅಪರಾಧಿಗಳಿಗೆ ಅತ್ಯಂತ ಕಠಿಣ ಕಾನೂನು ಜಾರಿಗೊಳಿಸುವಂತೆ ಒತ್ತಾಯಿಸಿ ಆಗಸ್ಟ್ 22ರಂದು ಪತ್ರ ಬರೆದಿದ್ದ ಮಮತಾ ಅವರು, ಕಠಿಣ ಕಾನೂನು ಕ್ರಮಗಳನ್ನು ಜಾರಿಗೊಳಿಸುವ ಮೂಲಕ ಸಮಾಜದಲ್ಲಿ ಇಂತಹ ಕೃತ್ಯ ಎಸಗಲು ಭಯ ಹುಟ್ಟಿಸುವಂತಹ ಶಿಕ್ಷೆಯನ್ನು ಜಾರಿಗೊಳಿಸಬೇಕೆಂದು ಪತ್ರದಲ್ಲಿ ಉಲ್ಲೇಖಿಸಿದ್ದರು.
ಇಂದು ಎರಡನೇ ಬಾರಿ ಪತ್ರ ಬರೆದಿರುವ ಅವರು, ‘ದೇಶದಲ್ಲಿ ವರದಿಯಾಗುತ್ತಿರುವ ಅತ್ಯಾಚಾರ ಪ್ರಕರಣಗಳು ನಮ್ಮೆಲ್ಲರ ಮನಸ್ಸನ್ನು ಕದಡಿದೆ. ಈ ಭಯಾನಕ ಕೃತ್ಯಗಳು ಸಮಾಜದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಮಕ್ಕಳು ಹಾಗೂ ಮಹಿಳೆಯರಿಗೆ ಸುರಕ್ಷಿತ ಸಮಾಜ ಕಲ್ಪಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ‘ ಎಂದು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳನ್ನು ನ್ಯಾಯಾಲಯಗಳಲ್ಲಿ ತ್ವರಿತವಾಗಿ ವಿಚಾರಣೆ ನಡೆಸಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸುವಂತೆಯೂ ಹಾಗೂ ವಿಚಾರಣಾ ಅವಧಿ 15 ದಿನಗಳಲ್ಲಿ ಮುಕ್ತಾಯಗೊಂಡು ತೀರ್ಪು ಪ್ರಕಟಿಸಬೇಕೆಂದು ಅವರು ಮನವಿ ಮಾಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.