ಗುವಾಹಟಿ: ದೇಶದಾದ್ಯಂತ ಕೊರೊನಾ ವೈರಸ್ ಸೋಂಕು ಹರಡುವುದನ್ನು ತಡೆಯಲು ಲಾಕ್‍ಡೌನ್‌ಗೆ ಆದೇಶಿಸಿದ್ದರೆ, ಅರುಣಾಚಲ ಪ್ರದೇಶದಲ್ಲಿ ಬೇಟೆಗಾರರ ಗುಂಪೊಂದು ಹಬ್ಬದೂಟಕ್ಕಾಗಿ 12 ಅಡಿ ಉದ್ದದ ಕಾಳಿಂಗ ಸರ್ಪವನ್ನು ಕೊಂದಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.
ವಿಡಿಯೊದಲ್ಲಿ ಮೂವರು ಯುವಕರು ತಮ್ಮ ಭುಜದ ಮೇಲೆ ವಿಷಪೂರಿತ ಹಾವಿನೊಂದಿಗೆ ಕಾಣಿಸಿಕೊಂಡಿದ್ದು, ಅವರು ಸರಿಸೃಪವನ್ನು ಕಾಡಿನಲ್ಲಿ ಕೊಂದಿದ್ದಾಗಿ ಹೇಳಿಕೊಂಡಿದ್ದಾರೆ.
ಅವರು ಹಬ್ಬಕ್ಕಾಗಿ ಎಲ್ಲ ವ್ಯವಸ್ಥೆಗಳನ್ನು ಮಾಡಿದ್ದರು. ಹಾವಿನ ಮಾಂಸವನ್ನು ತುಂಡು ಮಾಡಿ ಸ್ವಚ್ಛಗೊಳಿಸಲು ಬಾಳೆ ಎಲೆಗಳನ್ನು ಹರಿಡಿದ್ದರು. ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಲಾಕ್‌ಡೌನ್ ಆಗಿರುವುದರಿಂದ ತಮಗೆ ಅಕ್ಕಿಯೂ ಇರಲಿಲ್ಲ ಎಂದು ಒಬ್ಬಾತ ತಿಳಿಸಿದ್ದಾನೆ. ಈ ಮಧ್ಯೆ ಕಾಡಿಗೆ ತೆರಳಿದಾಗ ಕಾಳಿಂಗ ಸರ್ಪ ಕಾಣಿಸಿತು. ಅದನ್ನು ಹೊಡೆದು ಕೊಂದೆವು ಎಂದು ಮತ್ತೊಬ್ಬ ವ್ಯಕ್ತಿ ವಿಡಿಯೊದಲ್ಲಿ ಹೇಳಿದ್ದಾನೆ.
ಕಾಳಿಂಗ ಸರ್ಪವನ್ನು ಕೊಂದವರ ವಿರುದ್ಧ ವನ್ಯಜೀವಿ ಸಂರಕ್ಷಣಾ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಅವರು ತಲೆಮರೆಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕಾನೂನಿನಡಿಯಲ್ಲಿ ಕಾಳಿಂಗ ಸರ್ಪ ಸಂರಕ್ಷಿತ ಸರೀಸೃಪವಾಗಿದ್ದು, ಅದನ್ನು ಕೊಲ್ಲುವುದು ಜಾಮೀನು ರಹಿತ ಅಪರಾಧವಾಗಿದೆ. ಅರುಣಾಚಲ ಪ್ರದೇಶವು ಅಳಿವಿನಂಚಿನಲ್ಲಿರುವ ಹೆಚ್ಚಿನ ಸಂಖ್ಯೆಯ ಹಾವಿನ ಪ್ರಭೇದಗಳಿಗೆ ನೆಲೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.