ADVERTISEMENT

ಶಬರಿಮಲೆ: ಸ್ಪಾಟ್‌ ಬುಕಿಂಗ್‌ ಬದಲಿಗೆ ಅಕ್ಷಯ ಕೇಂದ್ರ

ಭಕ್ತರು ದರ್ಶನದಿಂದ ವಂಚಿತರಾಗದಿರಲು ಹೊಸ ವ್ಯವಸ್ಥೆ: ಕೇರಳ ದೇವಸ್ವಂ ಸಚಿವ ವಿ.ಎನ್‌ ವಾಸವನ್‌

ಪಿಟಿಐ
Published 13 ಅಕ್ಟೋಬರ್ 2024, 14:39 IST
Last Updated 13 ಅಕ್ಟೋಬರ್ 2024, 14:39 IST
ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ
ಶಬರಿಮಲೆ ಶ್ರೀ ಅಯ್ಯಪ್ಪಸ್ವಾಮಿ   

ಪಿಟಿಐ

ತಿರುವನಂತಪುರ: ಶಬರಿಮಲೆಯಲ್ಲಿ ಇನ್ನು ‘ಸ್ಪಾಟ್‌ ಬುಕಿಂಗ್‌’ ಇರುವುದಿಲ್ಲ ಎಂದು ಕೇರಳ ಮುಜರಾಯಿ ಸಚಿವ ವಿ.ಎನ್‌. ವಾಸವನ್‌ ಭಾನುವಾರ ಸ್ಪಷ್ಟಪಡಿಸಿದ್ದಾರೆ. ಆದರೆ, ಸ್ಪಾಟ್‌ ಬುಕಿಂಗ್‌ ಇಲ್ಲದಿದ್ದರೂ ಇಲ್ಲಿಗೆ ಬರುವ ಯಾವುದೇ ಭಕ್ತ ದರ್ಶನದಿಂದ ವಂಚಿತನಾಗುವುದಿಲ್ಲ ಎಂದು ಅಭಯ ನೀಡಿದ್ದಾರೆ.

ದರ್ಶನಕ್ಕೆ ಇರುವ ಸ್ಪಾಟ್‌ ಬುಕಿಂಗ್‌ ರದ್ದು ಮಾಡಿ ವರ್ಚುವಲ್‌ ಕ್ಯೂ (ಆನ್‌ಲೈನ್‌ ಬುಕಿಂಗ್‌) ಮೂಲಕ ಮಾತ್ರ ದರ್ಶನಕ್ಕೆ ಅವಕಾಶ ಮಾಡಿಕೊಡಲು ಸರ್ಕಾರ ಯೋಜನೆ ಹಾಕಿಕೊಂಡಿತ್ತು. ಇದಕ್ಕೆ ಭಾರೀ ವಿರೋಧ ವ್ಯಕ್ತವಾಗಿತ್ತು. ಈ ಯೋಜನೆಯಂತೆ ಸರ್ಕಾರ ಮುನ್ನಡೆದರೆ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಬಿಜೆಪಿ ಎಚ್ಚರಿಸಿತ್ತು. ವಿರೋಧ ಪಕ್ಷಗಳ ಒಕ್ಕೂಟವಾದ ಕಾಂಗ್ರೆಸ್‌ ‌ನೇತೃತ್ವದ ಯುಡಿಎಫ್‌ ಸಹ ಸ್ಪಾಟ್‌ ಬುಕಿಂಗ್‌ ಉಳಿಸಿಕೊಂಡು ಅದರ ಜತೆಯಲ್ಲೇ ವರ್ಚುವಲ್‌ ಕ್ಯೂ ಮುಂದುವರಿಸುವಂತೆ ಒತ್ತಾಯಿಸಿತ್ತು. ಏಕೆಂದರೆ ಬರುವ ಎಲ್ಲಾ ಭಕ್ತರಿಗೂ ಆನ್‌ಲೈನ್‌ ಬುಕಿಂಗ್‌ ಮಾಡಿಕೊಳ್ಳಲು ತಂತ್ರಜ್ಞಾನದ ಅರಿವು ಇರುವುದಿಲ್ಲ ಎಂದು ಪ್ರತಿಪಾದಿಸಿತ್ತು.

ADVERTISEMENT

ಇದೀಗ ಸ್ಪಾಟ್‌ ಬುಕಿಂಗ್‌ ಮುಂದುವರಿಸದಿದ್ದರೂ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲು ಅಕ್ಷಯ ಕೇಂದ್ರಗಳನ್ನು ಸ್ಥಾಪಿಸುವುದಾಗಿ ಸರ್ಕಾರ ತಿಳಿಸಿದೆ. ಈ ಬಗ್ಗೆ ಮಾಹಿತಿ ನೀಡಿರುವ ಸಚಿವ ವಾಸವನ್‌ ಅವರು ಸ್ಪಾಟ್‌ ಬುಕಿಂಗ್‌ ಮುಂದುವರಿಸುವುದಿಲ್ಲ. ಆದರೂ ಭಕ್ತರ ದರ್ಶನಕ್ಕೆ ‘ಬುಕಿಂಗ್‌ ಸ್ಲಾಟ್ಸ್‌’ ಪಡೆಯಲು ಅಕ್ಷಯ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ‘ಇಡತಾವಳಂ’ (ದೇವಸ್ಥಾನದ ಮಾರ್ಗದಲ್ಲಿ ಇರುವ ವಿಶ್ರಾಂತಿ ಅಥವಾ ನಿರೀಕ್ಷಣಾ ಪ್ರದೇಶ) ಎಂಬಲ್ಲಿ ಅಕ್ಷಯ ಕೇಂದ್ರಗಳನ್ನು ಸ್ಥಾಪಿಸಿ, ಭಕ್ತರಿಗೆ ಬುಕಿಂಗ್‌ ಸ್ಲಾಟ್ಸ್‌ ಪಡೆಯಲು ಅನುಕೂಲ ಮಾಡಿಕೊಡಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

ಅಕ್ಷಯ ಕೇಂದ್ರಗಳು ಸಾಮಾನ್ಯ ಸೇವಾ ಕೇಂದ್ರಗಳಾಗಿದ್ದು (ಸಿಎಸ್‌ಸಿ) ಒಂದೇ ಸೂರಿನಡಿ ಸರ್ಕಾರದ ಸೇವೆ ನೀಡುವ ಸೌಲಭ್ಯವಾಗಿದೆ. ಭಕ್ತರ ಸುರಕ್ಷತೆಗಾಗಿ ಯಾತ್ರಿಕರ ಸಂಖ್ಯೆಯನ್ನು ದಿನಕ್ಕೆ 80,000ಕ್ಕೆ ನಿಗದಿಪಡಿಸಲಾಗಿದೆ ಎಂದೂ ಸಚಿವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.