ADVERTISEMENT

ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಪಟ್ನಾ, ಹಜಾರಿಬಾಗ್‌ಗೆ ಸೀಮಿತ: ಸುಪ್ರೀಂ ಕೋರ್ಟ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಆಗಸ್ಟ್ 2024, 6:22 IST
Last Updated 2 ಆಗಸ್ಟ್ 2024, 6:22 IST
ಸುಪ್ರೀಂ ಕೋರ್ಟ್
ಸುಪ್ರೀಂ ಕೋರ್ಟ್   

ನವದೆಹಲಿ: ವೈದ್ಯಕೀಯ ಕೋರ್ಸ್‌ಗಳ ಪ್ರವೇಶಕ್ಕಾಗಿ ಮೇ 5ರಂದು ನಡೆದ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆಯ (ನೀಟ್‌-ಯುಜಿ) ಪ್ರಶ್ನೆ ಪತ್ರಿಕೆ ಸೋರಿಕೆ ಹಾಗೂ ಇತರೆ ಅವ್ಯವಹಾರಗಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ನಡೆಸಿತು.

‘ನೀಟ್‌–ಯುಜಿ 2024’ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯು ಪಟ್ನಾ, ಹಜಾರಿಬಾಗ್‌ಗೆ ಸೀಮಿತವಾಗಿದೆ. ಹೊರತುಪಡಿಸಿ ಪ್ರಕರಣದಲ್ಲಿ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದು ಸುಪ್ರೀಂ ಕೋರ್ಟ್ ಮುಖ್ಯನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ನೇತೃತ್ವದ ಪೀಠ ಹೇಳಿದೆ. ಜತೆಗೆ, ಮರು ಪರೀಕ್ಷೆಗೆ ಆದೇಶಿಸದ ಬಗ್ಗೆಯೂ ವಿವರಿಸಿದೆ.

‘ನೀಟ್‌–ಯುಜಿ 2024’ ಪ್ರವೇಶ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯು ಪಟ್ನಾ, ಹಜಾರಿಬಾಗ್‌ಗೆ ಸೀಮಿತವಾಗಿದ್ದು, ಪ್ರಕರಣದಲ್ಲಿ ಯಾವುದೇ ವ್ಯವಸ್ಥಿತ ಉಲ್ಲಂಘನೆಯಾಗಿಲ್ಲ ಎಂದು ತೀರ್ಮಾನಿಸಲಾಗಿದೆ. ಈ ರೀತಿಯ ಸಮಸ್ಯೆಗಳು ಮರುಕಳಿಸದಂತೆ ಕೇಂದ್ರ ಸರ್ಕಾರ ಕ್ರಮ ತೆಗೆದುಕೊಳ್ಳಬೇಕು ಎಂದು ಡಿ.ವೈ. ಚಂದ್ರಚೂಡ್ ಹೇಳಿದ್ದಾರೆ.

ADVERTISEMENT

ಸುಪ್ರೀಂ ಕೋರ್ಟ್‌ ನಿರ್ದೇಶನದ ಮೇರೆಗೆ ಈ ಸಾಲಿನ ‘ನೀಟ್‌–ಯುಜಿ’ಯ ಪರಿಷ್ಕೃತ ಅಂಕಪಟ್ಟಿಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ) ಜುಲೈ 25ರಂದು ಪ್ರಕಟಿಸಿತ್ತು.

ಭೌತವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆಯೊಂದಕ್ಕೆ ದೆಹಲಿ ಐಐಟಿಯ ಮೂವರು ತಜ್ಞರ ಸಮಿತಿ ನೀಡಿದ್ದ ಉತ್ತರವನ್ನು ಆಯ್ಕೆ ಮಾಡಿದ್ದ ಅಭ್ಯರ್ಥಿಗಳಿಗೆ ಮಾತ್ರ ಅಂಕ ನೀಡಬೇಕು. ಬೇರೆ ಆಯ್ಕೆ ಮಾಡಿದವರಿಗೆ ಯಾವುದೇ ಅಂಕಗಳನ್ನು ನೀಡಬಾರದು ಎಂದು ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಅದನ್ನು ಆಧರಿಸಿ ಪರಿಷ್ಕೃತ ಅಂಕಪಟ್ಟಿ ಪ್ರಕಟಿಸಲು ಕೋರ್ಟ್‌ ನಿರ್ದೇಶಿಸಿತ್ತು.

ನೀಟ್‌ ಪರೀಕ್ಷೆಯ ಅಕ್ರಮಕ್ಕೆ ಸಂಬಂಧಿಸಿದಂತೆ ಸಿಬಿಐ ತನಿಖೆ ಆರಂಭಿಸಿದ್ದು, ಪ್ರಕರಣ ಸಂಬಂಧ ಹಲವರನ್ನು ಬಂಧಿಸಿದೆ. ವಿವಾದದ ನಂತರ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯು (ಎನ್‌ಟಿಎ) ಪಾರದರ್ಶಕ, ಸುಗಮ, ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸುವ ದೃಷ್ಟಿಯಿಂದ ಇಸ್ರೊದ ಮಾಜಿ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್‌, ಐಐಟಿ ಕಾನ್ಪುರದ ಬೋರ್ಡ್‌ ನಿರ್ದೇಶಕರನ್ನು ಒಳಗೊಂಡ ತಜ್ಞರ ಉನ್ನತ ಮಟ್ಟದ ಸಮಿತಿಯನ್ನು ಕೇಂದ್ರ ಸರ್ಕಾರ ರಚಿಸಿದೆ.

ಎನ್‌ಟಿಎ ಕಾರ್ಯನಿರ್ವಹಣೆಯನ್ನು ಪರಿಶೀಲಿಸಲು ಮತ್ತು ಪರೀಕ್ಷಾ ಸುಧಾರಣೆಗಳನ್ನು ಶಿಫಾರಸು ಮಾಡಲು ಇಸ್ರೊದ ಮಾಜಿ ಅಧ್ಯಕ್ಷ ಡಾ.ಕೆ. ರಾಧಾಕೃಷ್ಣನ್‌ ನೇತೃತ್ವದ ಸಮಿತಿಯ ವ್ಯಾಪ್ತಿಯನ್ನು ಸುಪ್ರೀಂ ಕೋರ್ಟ್‌ ವಿಸ್ತರಿಸಿದ್ದು, ಸೆಪ್ಟೆಂಬರ್ 30ರೊಳಗೆ ವರದಿಯನ್ನು ಸಲ್ಲಿಸುವಂತೆ ಗಡುವು ನಿಗದಿಪಡಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.