ADVERTISEMENT

ಕಚ್ಚಾ ತೈಲ ಖರೀದಿ: ರೂಪಾಯಿಗಿಲ್ಲ ಮನ್ನಣೆ

ಕಚ್ಚಾ ತೈಲ ಖರೀದಿಗೆ ರೂಪಾಯಿಯಲ್ಲೇ ಪಾವತಿ: ದೊರೆಯದ ಸ್ಪಂದನೆ

ಪಿಟಿಐ
Published 24 ಡಿಸೆಂಬರ್ 2023, 16:06 IST
Last Updated 24 ಡಿಸೆಂಬರ್ 2023, 16:06 IST
   

ನವದೆಹಲಿ: ಆಮದು ಮಾಡಿಕೊಳ್ಳುವ ಕಚ್ಚಾ ತೈಲಕ್ಕೆ ರೂಪಾಯಿಯಲ್ಲೇ ಹಣ ಪಡೆದುಕೊಳ್ಳಬೇಕು ಎಂಬ ಭಾರತದ ಒತ್ತಾಸೆಗೆ ತೈಲ ಪೂರೈಕೆದಾರರಿಂದ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಕೇಂದ್ರ ತೈಲ ಸಚಿವಾಲಯವು ಸಂಸತ್ತಿನ ಸ್ಥಾಯಿ ಸಮಿತಿಗೆ ಈ ವಿಷಯ ತಿಳಿಸಿದೆ.

ಭಾರತದ ರೂಪಾಯಿಯನ್ನು ಬೇರೆ ದೇಶಗಳ ಕರೆನ್ಸಿಗೆ ಪರಿವರ್ತಿಸುವ ಪ್ರಕ್ರಿಯೆ ಕ್ಲಿಷ್ಟಕರ ಮತ್ತು ಅಧಿಕ ವಹಿವಾಟು ವೆಚ್ಚ ಭರಿಸಬೇಕಿರುವುದು ತೈಲ ಪೂರೈಕೆದಾರರು ಹಿಂದೇಟು ಹಾಕಿರುವುದಕ್ಕೆ ಮುಖ್ಯ ಕಾರಣ. 

ತೈಲ ಆಮದು ಸೇರಿದಂತೆ ಅಂತರರಾಷ್ಟ್ರೀಯ ವ್ಯಾಪಾರದಲ್ಲಿ ಬಹುತೇಕ ವಹಿವಾಟು ಡಾಲರ್‌ನಲ್ಲೇ ನಡೆಯುತ್ತದೆ. ಆದರೆ ಭಾರತದ ಕರೆನ್ಸಿಯನ್ನು ಜಾಗತೀಕರಣಗೊಳಿಸುವ ಪ್ರಯತ್ನದ ಭಾಗವಾಗಿ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ (ಆರ್‌ಬಿಐ), ಆಮದು ಮತ್ತು ರಫ್ತು ವಹಿವಾಟು ರೂಪಾಯಿಯಲ್ಲಿ ನಡೆಸಲು 2022ರ ಜುಲೈ 11ರಂದು ಅನುಮತಿ ನೀಡಿತ್ತು.

ADVERTISEMENT

ಆರ್‌ಬಿಐನ ಈ ಉಪಕ್ರಮಕ್ಕೆ ತೈಲ ಹೊರತುಪಡಿಸಿ ಇತರ ಕೆಲವು ವ್ಯಾಪಾರಗಳಲ್ಲಿ ತಕ್ಕಮಟ್ಟಿನ ಯಶಸ್ಸು ದೊರೆತಿದೆಯಾದರೂ, ತೈಲ ಪೂರೈಕೆದಾರರು ಮಾತ್ರ ಭಾರತದ ಕರೆನ್ಸಿಯಲ್ಲಿ ವಹಿವಾಟು ನಡೆಸಲು ಒಪ್ಪುತ್ತಿಲ್ಲ.

‘2022–23ರ ಹಣಕಾಸು ವರ್ಷದಲ್ಲಿ ಭಾರತದ ಸರ್ಕಾರಿ ಸ್ವಾಮ್ಯದ ಯಾವ ಕಂಪನಿಯೂ ಆಮದು ಮಾಡಿದ ಕಚ್ಚಾ ತೈಲಕ್ಕೆ ರೂಪಾಯಿಯಲ್ಲಿ ಹಣ ಪಾವತಿಸಿಲ್ಲ. ಯುಎಇಯ ಅಬುಧಾಬಿ ನ್ಯಾಷನಲ್‌ ಆಯಿಲ್‌ ಕಂಪನಿ (ಎಡಿಎನ್‌ಒಸಿ) ಸೇರಿದಂತೆ ಕಚ್ಚಾ ತೈಲ ಪೂರೈಕೆದಾರರು ಭಾರತದ ಕರೆನ್ಸಿ ಸ್ವೀಕರಿಸಲು ಹಿಂದೇಟು ಹಾಕಿದ್ದಾರೆ. ರೂಪಾಯಿಯನ್ನು ಸ್ವದೇಶದ ಕರೆನ್ಸಿಗೆ ಪರಿವರ್ತಿಸುವಾಗ ಅಧಿಕ ವೆಚ್ಚವಾಗುತ್ತದೆ ಎಂಬ ಕಾರಣ ಮುಂದಿಟ್ಟಿದ್ದಾರೆ. ಅದೇ ರೀತಿ, ರೂಪಾಯಿ ಮೌಲ್ಯ ಏರಿಳಿತವಾಗುವುದರ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ’ ಎಂದು ತೈಲ ಸಚಿವಾಲಯ ಹೇಳಿದೆ.

‘ಆಮದು ಮಾಡಿದ ಕಚ್ಚಾತೈಲದ ಪಾವತಿಯನ್ನು ರೂಪಾಯಿಯಲ್ಲಿ ಮಾಡಲು ಅವಕಾಶ ಕಲ್ಪಿಸಲಾಗಿದೆ. ತೈಲ ಪೂರೈಕೆದಾರರು ಇದಕ್ಕೆ ಸಂಬಂಧಿಸಿದ ಮಾನದಂಡಗಳನ್ನು ಒಪ್ಪಿಕೊಳ್ಳುವುದು ಅಗತ್ಯ’ ಎಂದು ಸಚಿವಾಲಯ ವಿವರಿಸಿದೆ.

‘ಸದ್ಯ, ರಿಲಯನ್ಸ್‌ ಇಂಡಸ್ಟ್ರೀಸ್ ಲಿಮಿಟೆಡ್‌ ಮತ್ತು ಇತರ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ಭಾರತದ ಕರೆನ್ಸಿಯಲ್ಲಿ ಕಚ್ಚಾ ತೈಲ ಆಮದು ಮಾಡಿಕೊಳ್ಳುವ ಸಂಬಂಧ ಯಾವುದೇ ತೈಲ ಪೂರೈಕೆದಾರರ ಜತೆಯೂ ಒಪ್ಪಂದ ಮಾಡಿಕೊಂಡಿಲ್ಲ’ ಎಂದು ಮಾಹಿತಿ ನೀಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.