ADVERTISEMENT

ಶಿವಾಜಿ ಎದುರು ತಲೆಬಾಗಿದರೆ ಪ್ರಯೋಜನವಿಲ್ಲ: ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ನಾಯಕನಿಂದ ಪರೋಕ್ಷ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2024, 12:38 IST
Last Updated 5 ಅಕ್ಟೋಬರ್ 2024, 12:38 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ಕೊಲ್ಹಾಪುರ: ಜನರನ್ನು ಬೆದರಿಸಿ, ದೇಶದ ಸಂವಿಧಾನ ಮತ್ತು ಸಂಸ್ಥೆಗಳನ್ನು ನಾಶ ಮಾಡಿ ನಂತರ ಶಿವಾಜಿ ಮಹಾರಾಜ ಅವರ ಎದುರು ತಲೆಬಾಗಿದರೆ ಪ್ರಯೋಜನವಿಲ್ಲ ಎಂದು ಬಿಜೆಪಿ ನೇತೃತ್ವದ ಕೇಂದ್ರ  ಸರ್ಕಾರದ ವಿರುದ್ಧ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರು ಶನಿವಾರ ವಾಗ್ದಾಳಿ ನಡೆಸಿದರು.

ಕೊಲ್ಹಾಪುರದಲ್ಲಿ ನಿರ್ಮಾಣವಾಗಿರುವ ಛತ್ರಪತಿ ಶಿವಾಜಿ ಮಹಾರಾಜ ಅವರ ಪ್ರತಿಮೆ ಅನಾವರಣಕ್ಕೂ ಮುನ್ನ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಿದ ಅವರು, ಅಧಿಕಾರದಲ್ಲಿ ಇರುವವರ ಉದ್ದೇಶ ಮತ್ತು ಸಿದ್ಧಾಂತದಲ್ಲಿ ದೋಷ ಇದೆ. ಅವರು (ಬಿಜೆಪಿ) ಸಿಂಧುದುರ್ಗದಲ್ಲಿ ಶಿವಾಜಿ ಅವರ ಪ್ರತಿಮೆ ನಿರ್ಮಿಸಿದರು. ಕೆಲವೇ ದಿನಗಳಲ್ಲಿ ಕುಸಿದುಬಿತ್ತು. ಅವರ ಉದ್ದೇಶ ಸರಿ ಇರಲಿಲ್ಲ. ‘ಶಿವಾಜಿ ಮಹಾರಾಜರ ಪ್ರತಿಮೆ ನಿರ್ಮಿಸುವುದಾದರೆ ಅವರ ಸಿದ್ಧಾಂತವನ್ನು ಅನುಸರಿಸಬೇಕು’ ಎಂಬ ಸಂದೇಶವನ್ನು ಪ್ರತಿಮೆಯೇ ನೀಡಿತು ಎಂದು ಹೇಳಿದರು.

ಪ್ರಧಾನಿ ನರೇಂದ್ರ ಮೋದಿ ಅವರನ್ನು ಪರೋಕ್ಷವಾಗಿ ಉಲ್ಲೇಖಿಸಿ, ‘ಅವರು ಬೆಳಿಗ್ಗೆ ಎದ್ದು ಸಂವಿಧಾನವನ್ನು ಹೇಗೆ ನಾಶ ಮಾಡಬೇಕು ಎಂದು ಚಿಂತಿಸುತ್ತಾರೆ. ದೇಶದ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಾರೆ. ಜನರನ್ನು ಬೆದರಿಸುತ್ತಾರೆ. ನಂತರ ಶಿವಾಜಿ ಪ್ರತಿಮೆ ಎದುರು ತಲೆಬಾಗುತ್ತಾರೆ. ಇದರಿಂದ ಯಾವುದೇ ಪ್ರಯೋಜನ ಇಲ್ಲ. ಶಿವಾಜಿ ಪ್ರತಿಮೆ ಮುಂದೆ ನಿಂತು ನಮಸ್ಕರಿಸುತ್ತೀರಿ ಎಂದಾದರೆ ಸಂವಿಧಾನವನ್ನು ರಕ್ಷಿಸಬೇಕು’ ಎಂದು ಹರಿಹಾಯ್ದರು.

ADVERTISEMENT

‘ಈ ದೇಶವು ಪ್ರತಿಯೊಬ್ಬರಿಗೂ ಸೇರಿದ್ದು ಎಂದು ಛತ್ರಪತಿ ಶಿವಾಜಿ ಸಂದೇಶ ನೀಡಿದ್ದಾರೆ. ಸಂವಿಧಾನವು ಅವರ ಸಿದ್ಧಾಂತದ ಪ್ರತೀಕ. ಶಿವಾಜಿ ಮಹಾರಾಜ ಮತ್ತು ಸಮಾಜ ಸುಧಾರಕ ಸಾಹು ಮಹಾರಾಜ ಅಂಥವರು ಇರದೇ ಇದ್ದರೆ ಸಂವಿಧಾನವೇ ಇರುತ್ತಿರಲಿಲ್ಲ’ ಎಂದರು.

‘ದೇಶದಲ್ಲಿ ಎರಡು ಸಿದ್ಧಾಂತಗಳಿವೆ. ಒಂದು; ಸಮಾನತೆ, ಏಕತೆ ಬಗ್ಗೆ ಮಾತನಾಡುವ ಸಂವಿಧಾನವನ್ನು ರಕ್ಷಿಸುತ್ತದೆ. ಇದು ಶಿವಾಜಿ ಅವರ ಸಿದ್ಧಾಂತ. ಇನ್ನೊಂದು; ಸಂವಿಧಾನವನ್ನು ನಾಶಪಡಿಸುತ್ತದೆ’ ಎಂದು ಹೇಳಿದರು.

ಪ್ರತಿಮೆ ಕುಸಿದ ನಂತರ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ, ‘ಛತ್ರಪತಿ ಶಿವಾಜಿ ಕೇವಲ ಒಬ್ಬ ರಾಜ ಅಥವಾ ಒಂದು ಹೆಸರಲ್ಲ. ನಮ್ಮ ಆರಾಧ್ಯ ದೈವ. ಇಂದು ನಾನು ಅವರ ಕಾಲಿಗೆ ಬಿದ್ದು ಕ್ಷಮೆಯಾಚಿಸುತ್ತೇನೆ’ ಎಂದು ಹೇಳಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.