ಪುಣೆ: ಐಎಎಸ್ ಪ್ರೊಬೇಷನರಿ ಅಧಿಕಾರಿ ಪೂಜಾ ಖೇಡ್ಕರ್ ಅವರಿಗೆ ಚಲನಕ್ಕೆ ಸಂಬಂಧಿಸಿದಂತೆ ಶೇ 7ರಷ್ಟು ಅಂಗವೈಕಲ್ಯ ಇದೆ ಎಂದು ಪ್ರಮಾಣಪತ್ರ ನೀಡಿದ್ದರಲ್ಲಿ ಯಾವುದೇ ಲೋಪ ಆಗಿಲ್ಲ. ನಿಯಮದ ಪ್ರಕಾರವೇ ಅದನ್ನು ನೀಡಲಾಗಿದೆ ಎಂದು ಪುಣೆ ಬಳಿಯ ಸರ್ಕಾರಿ ಆಸ್ಪತ್ರೆಯ ಆಂತರಿಕ ತನಿಖೆಯಿಂದ ಗೊತ್ತಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪುಣೆಯ ಪಿಂಪ್ರಿ ಚಿಂಚ್‌ವಾಡ್ ಮುನ್ಸಿಪಲ್ ಕಾರ್ಪೊರೇಷನ್ (ಪಿಸಿಎಂಸಿ) ನಡೆಸುತ್ತಿರುವ ಯಶವಂತರಾವ್ ಚವ್ಹಾಣ್ ಸ್ಮಾರಕ (ವೈಸಿಎಂ) ಆಸ್ಪತ್ರೆಯು ಖೇಡ್ಕರ್ ಅವರಿಗೆ ಆಗಸ್ಟ್ 2022ರಲ್ಲಿ ಈ ಕುರಿತು ಪ್ರಮಾಣಪತ್ರ ನೀಡಿತ್ತು.
ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ನಡೆಸಿದ್ದ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಖೇಡ್ಕರ್ ಅವರು ಅಂಗವಿಕಲ ಮತ್ತು ಒಬಿಸಿ ಕೋಟಾವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅವರು ಯುಪಿಎಸ್‌ಸಿಗೆ ಸಲ್ಲಿಸಿರುವ ವಿವಿಧ ಪ್ರಮಾಣಪತ್ರಗಳ ಸತ್ಯಾಸತ್ಯತೆ ತಿಳಿದುಕೊಳ್ಳಲು ತನಿಖೆಗಳು ನಡೆಯುತ್ತಿವೆ.
2022ರಲ್ಲಿ ಅರ್ಜಿ:
‘2022ರಲ್ಲಿ ತಮ್ಮ ಎಡ ಮೊಣಕಾಲಿನ ಬಗ್ಗೆ ಅಂಗವಿಕಲ ಪ್ರಮಾಣಪತ್ರ ಪಡೆಯಲು ಅವರು ಅರ್ಜಿ ಸಲ್ಲಿಸಿದ್ದರು. ಈ ಕುರಿತು ವೈದ್ಯಕೀಯ ಪರೀಕ್ಷೆಗಳಿಗಾಗಿ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದರು. ವಿವಿಧ ಇಲಾಖೆಗಳಿಂದ ಮೌಲ್ಯಮಾಪನವನ್ನೂ ಮಾಡಲಾಗಿತ್ತು. 2022ರ ಆಗಸ್ಟ್ 24ರಂದು ಅವರಿಗೆ ಮೊಣಕಾಲಿನ ಶೇ 7ರಷ್ಟು ಅಂಗವೈಕಲ್ಯವಿದೆ ಎಂದು ಪ್ರಮಾಣಪತ್ರ ನೀಡಲಾಗಿತ್ತು’ ಎಂದು ಅಧಿಕಾರಿ ಹೇಳಿದ್ದಾರೆ.
ಅಂಗವಿಕಲ ಪ್ರಮಾಣಪತ್ರದ ವಿತರಣೆಯಲ್ಲಿ ಲೋಪ ಆಗಿದೆಯೇ ಎಂಬುದರ ಕುರಿತು ತನಿಖೆ ನಡೆಸುವಂತೆ ಜಿಲ್ಲಾಧಿಕಾರಿಗಳಿಂದ ನಿರ್ದೇಶನ ಬಂದ ಬಳಿಕ, ವೈಸಿಎಂ ಡೀನ್ ಡಾ. ರಾಜೇಂದ್ರ ವಾಬಲ್ ಅವರು ‘ಆರ್ಥೋಪೆಡಿಕ್’ ಮತ್ತು ‘ಫಿಸಿಯೋಥೆರಪಿ’ ವಿಭಾಗಗಳಿಗೆ ಆಂತರಿಕ ತನಿಖೆ ನಡೆಸಿ, ವರದಿ ನೀಡುವಂತೆ ಆದೇಶಿಸಿದ್ದರು.
ಈ ಕುರಿತ ವರದಿ ಸೋಮವಾರ ಕೈಸೇರಿದ್ದು, ಖೇಡ್ಕರ್ ಅವರಿಗೆ ಚಲನಕ್ಕೆ ಸಂಬಂಧಿಸಿದಂತೆ ಶೇ 7ರಷ್ಟು ಅಂಗವೈಕಲ್ಯ ಇದೆ ಎಂದು ನಿಯಮದ ಪ್ರಕಾರವೇ ಪ್ರಮಾಣಪತ್ರ ನೀಡಲಾಗಿದೆ ಎಂದು ಉಲ್ಲೇಖಿಸಲಾಗಿದೆ ಎಂದು ಡಾ. ವಾಬಲ್ ತಿಳಿಸಿದ್ದಾರೆ.
ಶಿಕ್ಷಣ, ಉದ್ಯೋಗಕ್ಕೆ ಉಪಯುಕ್ತವಲ್ಲ:
‘ಆದರೆ ಶಿಕ್ಷಣ ಅಥವಾ ಉದ್ಯೋಗ ಸೌಲಭ್ಯ ಪಡೆದುಕೊಳ್ಳಲು ಈ ಪ್ರಮಾಣಪತ್ರ ಯಾವುದೇ ರೀತಿಯಲ್ಲೂ ಉಪಯೋಗಕ್ಕೆ ಬರುವುದಿಲ್ಲ’ ಎಂದು ಹೇಳಿರುವ ಅವರು, ‘ಆಂತರಿಕ ತನಿಖೆಯ ಪ್ರಕಾರ, ಯಾರಿಂದಲೂ ತಪ್ಪು ಆಗಿಲ್ಲ’ ಎಂದಿದ್ದಾರೆ.
ಖೇಡ್ಕರ್ ಅವರು 2018 ಮತ್ತು 2021ರಲ್ಲಿ ಅಹಮದ್‌ನಗರ ಜಿಲ್ಲಾ ಸಿವಿಲ್ ಆಸ್ಪತ್ರೆಯಿಂದ ದೃಷ್ಟಿ ದೋಷ ಮತ್ತು ಮಾನಸಿಕ ಅಂಗವೈಕಲತೆಗೆ ಸಂಬಂಧಿಸಿದ ಪ್ರಮಾಣಪತ್ರಗಳನ್ನು ಪಡೆದು ಯುಪಿಎಸ್‌ಸಿಗೆ ಸಲ್ಲಿಸಿದ್ದರು.
2023ರ ತಂಡದ ಐಎಎಸ್ ಅಧಿಕಾರಿ ಆಗಿರುವ ಅವರು ಪುಣೆಯ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರೊಬೇಷನರಿ ಉಪ ವಿಭಾಗಾಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದರು. ತಮ್ಮ ಖಾಸಗಿ ಕಾರಿಗೆ ಸರ್ಕಾರಿ ಲಾಂಛನ, ಕೆಂಪು ದೀಪ ಅಳವಡಿಸಿದ್ದು ವಿವಾದಕ್ಕೀಡಾಗಿತ್ತು. ಅದರ ಬೆನ್ನಲ್ಲೇ ಅವರನ್ನು ಪುಣೆಯಿಂದ ವಾಶಿಮ್‌ಗೆ ವರ್ಗಾಯಿಸಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.