ADVERTISEMENT

‘ಉಚಿತ ಕೊಡುಗೆಗಳು ಬಡವರನ್ನು ಸೋಮಾರಿ ಮಾಡುವುದಿಲ್ಲ: ಅಭಿಜಿತ್‌ ಬ್ಯಾನರ್ಜಿ

ಪಿಟಿಐ
Published 11 ಏಪ್ರಿಲ್ 2021, 19:30 IST
Last Updated 11 ಏಪ್ರಿಲ್ 2021, 19:30 IST
ಅಭಿಜಿತ್‌
ಅಭಿಜಿತ್‌   

ಮುಂಬೈ: ಬಡವರನ್ನು ಬಡತನದಿಂದ ಮೇಲೆತ್ತುವ ಯೋಜನೆಗಳಲ್ಲಿ ಸರ್ಕಾರದ ಪಾತ್ರ ಸೀಮಿತವಾಗಿರಬೇಕು. ಬಡಜನರಿಗೆ ಉಚಿತ ಕೊಡುಗೆಗಳನ್ನು ನೀಡಿದರೆ ಅವರು ಸೋಮಾರಿಗಳಾಗುತ್ತಾರೆ ಎಂಬ ವಾದವು ಸರಿಯಲ್ಲ.ಇಂತಹ ವಾದಕ್ಕೆ ಯಾವುದೇ ಆಧಾರ ಇಲ್ಲ ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಭಿಜಿತ್‌ ಬ್ಯಾನರ್ಜಿ ಹೇಳಿದ್ದಾರೆ.

ಕಳೆದ ದಶಕದಲ್ಲಿ ಏಷ್ಯಾ, ಆಫ್ರಿಕಾ ಮತ್ತು ಲ್ಯಾಟಿನ್‌ ಅಮೆರಿಕದ ವೈವಿಧ್ಯಮಯ ಅರ್ಥ ವ್ಯವಸ್ಥೆಗಳಲ್ಲಿ ತಾವು ಕೈಗೊಂಡ ಅಧ್ಯಯನಗಳಲ್ಲಿ ಕೊಡುಗೆಯಿಂದ ಜನರು ಸೋಮಾರಿಗಳಾಗುತ್ತಾರೆ ಎಂಬ ವಾದಕ್ಕೆ ಪೂರಕವಾದ ಅಂಶಗಳು ಕಂಡು ಬಂದಿಲ್ಲ. ಬದಲಿಗೆ, ಇಂತಹ ಕೊಡುಗೆಗಳನ್ನು ಪಡೆದುಕೊಂಡವರ ಉತ್ಪಾದಕತೆ ಹೆಚ್ಚಿದೆ ಮತ್ತು ಅವರು ಹೆಚ್ಚು ಕ್ರಿಯಾಶೀಲರಾಗಿದ್ದಾರೆ ಎಂದು ಬ್ಯಾನರ್ಜಿ ವಿವರಿಸಿದ್ದಾರೆ.

ಉಚಿತವಾಗಿ ಏನನ್ನಾದರೂ ಕೊಡುವುದರಿಂದ ಜನರು ಸೋಮಾರಿಗಳಾಗುತ್ತಾರೆ ಎಂಬುದು ಆಯಾ ಕಾಲದ ಸರ್ಕಾರಗಳ‍ಪ್ರತಿಪಾದನೆ. ಬಡವರಿಗೆ ಆದಷ್ಟು ಕಡಿಮೆ ಕೊಡುವುದಕ್ಕಾಗಿ ಈ ವಾದವನ್ನು ಮುಂದಿರಿಸಲಾಗಿದೆ. ಭಾರತ ಮಾತ್ರವಲ್ಲ ಜಗತ್ತಿನ ಎಲ್ಲಿಯೂ ಇದಕ್ಕೆ ಪುರಾವೆ ಇಲ್ಲ. ಬದಲಿಗೆ ಉಚಿತ ಕೊಡುಗೆ ಯೋಜನೆಗಳ ಫಲಾನುಭವಿಗಳ ಬದುಕು ಉತ್ತಮಗೊಂಡಿದೆ ಎಂಬುದಕ್ಕೆ ಪುರಾವೆ ಇದೆ ಎಂದು ಅವರು ಪ್ರತಿಪಾದಿಸಿದ್ದಾರೆ.

ADVERTISEMENT

ಬಂಧನ್‌ ಬ್ಯಾಂಕ್‌ನ 20ನೇ ಸ್ಥಾಪನಾ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಬಡವರಿಗಾಗಿ ರೂಪಿಸುವ ಯೋಜನೆಯಿಂದ ಅವರ ಆದಾಯ ಶೇ 25ರಷ್ಟು ಹೆಚ್ಚಳವಾಗಿದೆ. ಅವರು ವಸ್ತುಗಳನ್ನು ಬಳಸುವ ಪ್ರಮಾಣವು ಶೇ 18ರಷ್ಟು ಏರಿಕೆಯಾಗಿದೆ ಎಂಬುದು ಬಂಧನ್‌ ಬ್ಯಾಂಕ್‌ ಒಂದು ದಶಕದಲ್ಲಿ ಸಂಗ್ರಹಿಸಿದ ದತ್ತಾಂಶಗಳ ವಿಶ್ಲೇಷಣೆಯಿಂದ ತಿಳಿದು ಬಂದಿದೆ ಎಂಬುದನ್ನು ಅವರು ಉಲ್ಲೇಖಿಸಿದರು. ಬದುಕು ಉತ್ತಮಗೊಳ್ಳುತ್ತಿದ್ದಂತೆಯೇ ಜನರು ಹೆಚ್ಚು ಕ್ರಿಯಾಶೀಲರಾಗುತ್ತಾರೆ. ಪರಿಣಾಮವಾಗಿ ಅವರು ಹೆಚ್ಚು ಸಂಪತ್ತು ಸೃಷ್ಟಿಸುತ್ತಾರೆ. ಜೀವನ ಮಟ್ಟ ಉತ್ತಮಗೊಳ್ಳುತ್ತದೆ. ಮಕ್ಕಳನ್ನು ಒಳ್ಳೆಯ ಶಾಲೆಗೆ ಕಳುಹಿಸುತ್ತಾರೆ ಎಂದು ಅವರು ವಿಶ್ಲೇಷಿಸಿದ್ದಾರೆ.

ಜಾಗತೀಕರಣದ ಅನುಕೂಲ, ಅಪಾಯ

ಜಾಗತೀಕರಣದಿಂದ ಭಾರತಕ್ಕೆ ಅನುಕೂಲಗಳಾಗಿವೆ. ಆದರೆ, ಇದರ ಜತೆಗೇ ಇರುವ ಅಪಾಯಗಳನ್ನು ನಿಭಾಯಿಸುವ ವ್ಯವಸ್ಥೆಯನ್ನು ದೇಶವು ರೂಪಿಸಿಕೊಳ್ಳಬೇಕು ಎಂದು ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ. 1990ರ ದಶಕದ ಆರಂಭದಿಂದಲೇ ಭಾರತದ ರಫ್ತಿನಲ್ಲಿ ಏರಿಕೆಯಾಗಿದೆ. ಇದು ದೇಶಕ್ಕೆ ದೊರೆತ ಅನುಕೂಲ. ಜಾಗತೀಕರಣದಿಂದಾಗಿ ಹೆಚ್ಚು ಸಂಪತ್ತು ಸಂಗ್ರಹವಾಗುತ್ತದೆ. ಈ ಸಂಪತ್ತು ಬಳಸಿಕೊಂಡು ಜಾಗತೀಕರಣದ ಅಪಾಯಗಳನ್ನು ನಿಭಾಯಿಸಬಹುದು ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.