ADVERTISEMENT

ಹಿಂದಿ ಹೇರಿಕೆ ಸಾಧ್ಯವಿಲ್ಲ: ಮಗುವಿಗೆ ತಮಿಳು ಹೆಸರನ್ನೇ ಇಡಿ; ಉದಯನಿಧಿ ಸ್ಟಾಲಿನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 22 ಅಕ್ಟೋಬರ್ 2024, 7:11 IST
Last Updated 22 ಅಕ್ಟೋಬರ್ 2024, 7:11 IST
<div class="paragraphs"><p>ಉದಯನಿಧಿ ಸ್ಟಾಲಿನ್ </p></div>

ಉದಯನಿಧಿ ಸ್ಟಾಲಿನ್

   

–ಪಿಟಿಐ ಚಿತ್ರ

ದಿಂಡಿಗಲ್‌ (ಚೆನ್ನೈ): ತಮಿಳುನಾಡಿನ ಜನತೆಯ ಮೇಲೆ ಹಿಂದಿ ಹೇರಿಕೆ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಯಾವುದೇ ಬೆಲೆ ತೆತ್ತಾದರೂ ಸರಿ ಅಂತಹ ಕ್ರಮಗಳನ್ನು ತಡೆಯುತ್ತೇವೆ ಎಂದು ಉಪ ಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ADVERTISEMENT

ದಿಂಡಿಗಲ್‌ನಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ರಾಜ್ಯದಲ್ಲಿ ನವದಂಪತಿಗಳು ತಮ್ಮ ಮಗುವಿಗೆ ಸುಂದರವಾದ ತಮಿಳು ಹೆಸರನ್ನು ಇಡಲು ನಾನು ವಿನಂತಿಸುತ್ತೇನೆ. ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಮಾಡುವುದಕ್ಕೆ ಅನೇಕರು ಪ್ರಯತ್ನಿಸುತ್ತಿದ್ದಾರೆ ಮತ್ತು ಹತಾಶರಾಗಿದ್ದಾರೆ’ ಎಂದು ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹೊಸ ಶಿಕ್ಷಣ ನೀತಿಯನ್ನು ಜಾರಿಗೊಳಿಸುವ ನೆಪದಲ್ಲಿ ಕೆಲವರು ಹಿಂದಿ ಹೇರಲು ಯತ್ನಿಸಿದ್ದರು. ಆದರೆ, ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರ ಅಚಲ ಪ್ರಯತ್ನದಿಂದಾಗಿ ಅದು ವಿಫಲವಾಯಿತು. ಈಗ ಕೆಲವರು ತಮಿಳು ನಾಡಗೀತೆಯಲ್ಲಿ ‘ಡ್ರಾವಿಡ’ ಪದ ಕೈಬಿಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ನಾವು ಹಾಗೆ ಮಾಡುವುದಕ್ಕೆ ಬಿಡುವುದಿಲ್ಲ. ನಮ್ಮ ಪಕ್ಷದ (ಡಿಎಂಕೆ) ಕಾರ್ಯಕರ್ತ ಅಥವಾ ತಮಿಳುನಾಡಿನ ಯಾವುದೇ ವ್ಯಕ್ತಿ ಬದುಕಿರುವವರೆಗೆ ಹೊರಗಿನವರಿಗೆ ‘ದ್ರಾವಿಡ’, ‘ತಮಿಳುನಾಡು’ ಅಥವಾ ‘ತಮಿಳ’ನ್ನು ಮುಟ್ಟುವುದಕ್ಕೆ ಬಿಡುವುದಿಲ್ಲ ಎಂದು ಕಿಡಿಕಾರಿದ್ದಾರೆ.

‘ಸಮಾಜ ಸುಧಾರಕ ಪೆರಿಯಾರ್ ಅವರು ಸತಿಯ ಸಾಮಾಜಿಕ ಪಿಡುಗಿನ ವಿರುದ್ಧ ಹೋರಾಡಿದರು. ನಾನು ಈ ಸಂಸ್ಕೃತಿಯ ಬಗ್ಗೆ ಮಾತನಾಡುವಾಗ ನನ್ನ ಹೇಳಿಕೆಗಳನ್ನು ತಿರುಚಲಾಯಿತು ಮತ್ತು ದೇಶದಾದ್ಯಂತ ನನ್ನ ವಿರುದ್ಧ ಪ್ರಕರಣಗಳನ್ನು ದಾಖಲಿಸಲಾಯಿತು. ಆದರೆ, ನಾನು ತಲೆಬಾಗಲು ನಿರಾಕರಿಸಿದೆ’ ಎಂದು ಉದಯನಿಧಿ ಹೇಳಿಕೊಂಡಿದ್ದಾರೆ.

‘30 ವರ್ಷಗಳ ಹಿಂದೆ ತಮಿಳುನಾಡಿನ ಆಗಿನ ಮುಖ್ಯಮಂತ್ರಿ ಎಂ. ಕರುಣಾನಿಧಿ ಅವರು ಪೂರ್ವಜರ ಆಸ್ತಿಯಲ್ಲಿ ಮಹಿಳೆಯರು ಸಮಾನ ಪಾಲು ಪಡೆಯಲು ಅವಕಾಶ ಕಲ್ಪಿಸಿಕೊಟ್ಟಿದ್ದರು. ಇದೀಗ ಸ್ಟಾಲಿನ್ ಅವರೂ ಕರುಣಾನಿಧಿ ಹಾದಿಯಲ್ಲೇ ಮಹಿಳಾ ಕಲ್ಯಾಣಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದಾರೆ. ಉಚಿತ ಬಸ್ ಯೋಜನೆಯು ಕೋಟಿಗಟ್ಟಲೆ ಮಹಿಳೆಯರಿಗೆ ಪ್ರಯೋಜನ ನೀಡಿದೆ. ಇತರೆ ರಾಜ್ಯಗಳು ಈ ಯೋಜನೆಯಿಂದ ಸ್ಫೂರ್ತಿ ಪಡೆದಿವೆ. ಇದು ದ್ರಾವಿಡ ಆಡಳಿತದ ಮಾದರಿ’ ಎಂದು ಕೊಂಡಾಡಿದ್ದಾರೆ.

ಹಲವು ಡಿಎಂಕೆ ನಾಯಕರನ್ನು ಕಡೆಗಣಿಸಿ ಬಹುಬೇಗ ಉಪ ಮುಖ್ಯಮಂತ್ರಿಯಾದರು ಎಂಬ ವಿರೋಧ ಪಕ್ಷದ ನಾಯಕ ಪಳನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ ಉದಯನಿಧಿ, ‘ನನ್ನನ್ನು ಟೀಕಿಸಲು ಅವರು ಸ್ವತಂತ್ರರು. ನಾನು ಯಾವಾಗಲೂ ಟೀಕೆಗಳನ್ನು ಸ್ವಾಗತಿಸುತ್ತೇನೆ. ನನಗಿಂತ ಅವರು ಹೆಚ್ಚಿನ ರಾಜಕೀಯ ಅನುಭವ ಹೊಂದಿದ್ದಾರೆ’ ಎಂದಷ್ಟೇ ಹೇಳಿದ್ದಾರೆ.

ಈಚೆಗೆ ತಮಿಳುನಾಡು ರಾಜ್ಯಪಾಲ ಆರ್‌.ಎನ್‌.ರವಿ ಅವರು ಭಾಗವಹಿಸಿದ್ದ ಕಾರ್ಯಕ್ರಮವೊಂದರಲ್ಲಿ ತಮಿಳು ನಾಡಗೀತೆ ಹಾಡುವ ವೇಳೆ ‘ದ್ರಾವಿಡ’ ಕುರಿತ ಸಾಲುಗಳನ್ನು ಕೈಬಿಟ್ಟಿರುವ ಸಂಗತಿ ತಮಿಳುನಾಡು ಸರ್ಕಾರ ಮತ್ತು ರಾಜ್ಯಪಾಲರ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿತ್ತು. ಈ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್, ರಾಜ್ಯಪಾಲ ಆರ್.ಎನ್‌.ರವಿ ಅವರನ್ನು ಕೂಡಲೇ ವಾಪಸು ಕರೆಸಿಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದ್ದರು. ಈ ಕುರಿತು ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.