ಗುವಾಹಟಿ: ಅಸ್ಸಾಂನಲ್ಲಿ ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಲಂಚ ನೀಡದೆ ಯಾರಿಗೂ ಸರ್ಕಾರಿ ನೌಕರಿ ಸಿಕ್ಕಿಲ್ಲ ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಆರೋಪಿಸಿದ್ದಾರೆ.
ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ‘ತಮ್ಮ ಆಡಳಿತಾವಧಿಯಲ್ಲಿ ಸುಮಾರು ಎರಡು ಲಕ್ಷ ಯುವಜನತೆಗೆ ಸರ್ಕಾರಿ ಉದ್ಯೋಗ ನೀಡುವ ಗುರಿ ಹೊಂದಿರುವುದಾಗಿ ಹೇಳಿದ್ದಾರೆ. ಅಲ್ಲದೆ, ತಾವು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದಾಗಿನಿಂದ ಈವರೆಗೆ 1.4 ಲಕ್ಷ ಯುವಜನತೆ ಉದ್ಯೋಗ ಪಡೆದುಕೊಂಡಿದ್ದಾರೆ’ ಎಂದು ಶರ್ಮಾ ತಿಳಿಸಿದ್ದಾರೆ.
‘ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಲಂಚ ನೀಡದೆ ಸರ್ಕಾರಿ ನೌಕರಿಗಳು ಸಿಗುತ್ತವೆ ಎಂದು ಯುವಜನತೆ ನಂಬುತ್ತಿರಲಿಲ್ಲ. ಕಡಿಮೆ ವೇತನ ಕೆಲಸಗಳಿಗೂ ₹1 ಕೋಟಿ ಲಂಚ ನೀಡಬೇಕಿತ್ತು. ಅಸ್ಸಾಂ ಸಾರ್ವಜನಿಕ ಸೇವಾ ಆಯೋಗದ (ಎಪಿಎಸ್‌ಸಿ) ಅಧ್ಯಕ್ಷರ ಸ್ಥಾನಕ್ಕೆ ಉದ್ಯೋಗ ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡುವಂತಹ ವ್ಯಕ್ತಿಗಳನ್ನೇ ಕಾಂಗ್ರೆಸ್ ಸರ್ಕಾರ ಆಯ್ಕೆ ಮಾಡುತ್ತಿತ್ತು. ಆದರೆ, ಈಗ ಯಾವುದೇ ಲಂಚ ಪಡೆಯದೆ ಪಾರದರ್ಶಕವಾಗಿ ನೇಮಕಾತಿ ಪರೀಕ್ಷೆಗಳನ್ನು ನಾವು ಆಯೋಜಿಸುತ್ತಿದ್ದೇವೆ’ ಎಂದು ಅವರು ತಿಳಿಸಿದ್ದಾರೆ.
2021ರ ವಿಧಾನಸಭೆ ಚುನಾವಣೆ ಪ್ರಚಾರ ಸಂದರ್ಭದಲ್ಲಿ ಪ್ರತಿ ವರ್ಷ ಒಂದು ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಬಿಜೆಪಿ ಭರವಸೆ ನೀಡಿತ್ತು. ಆದರೆ, ಬಳಿಕ ಈ ಅಂಕಿ ಅಂಶವು ಐದು ವರ್ಷಗಳ ಅವಧಿಗೆ ಎಂದು ಹೇಳಿಕೊಂಡಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.