ನಾಗಪುರ: ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ತೆಗೆದಕೊಳ್ಳುವ ಅವಶ್ಯಕತೆ ಇಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಭಾನುವಾರ ಹೇಳಿದ್ದಾರೆ.
ಚುನಾವಣೆ ಪ್ರಚಾರಸಭೆಯಲ್ಲಿ ಮಾತನಾಡಿದ ಅವರು ರಾಜ್ಯದ ಜನರು ಬಿಜೆಪಿ ನೇತೃತ್ವದ ಮೈತ್ರಿಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರಿಗೂ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರಂತೆ ನೆನಪಿನ ಶಕ್ತಿಯ ಸಮಸ್ಯೆಯಿದೆ ಎಂಬ ರಾಹುಲ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಗಡ್ಕರಿ, ರಾಹುಲ್ ಗಾಂಧಿ ಮಾತನಾಡುವ ಶೈಲಿ, ಅವರ ಹೇಳಿಕೆಗಳನ್ನು ಯಾರೂ ಗಂಭೀರವಾಗಿ ತೆಗೆದುಕೊಳ್ಳಬಾರದು ಎಂದರು.
ನಾವು 400ಕ್ಕೂ ಹೆಚ್ಚು ಸ್ಥಾನಗಳನ್ನು ಗೆದ್ದರೆ, ಬಾಬಾಸಾಹೇಬ್ ಅಂಬೇಡ್ಕರ್ ರಚಿಸಿದ ಸಂವಿಧಾನವನ್ನು ತಿದ್ದುಪಡಿ ಮಾಡುತ್ತೇವೆ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದ್ದಾರೆ ಎಂದು ಕಾಂಗ್ರೆಸ್‌ನವರು ಒಂದು ಕಥೆಯನ್ನು ಕಟ್ಟಿದ್ದಾರೆ. ಸಂವಿಧಾನವನ್ನು ಬದಲಿಸುವ ಪ್ರಶ್ನೆಯೇ ಇಲ್ಲ. ನಾವು ಅದನ್ನು ಮಾಡುವುದಿಲ್ಲ, ಇತರರನ್ನು ಕೂಡ ಮಾಡಲು ಬಿಡುವುದಿಲ್ಲ ಎಂದು ಗಡ್ಕರಿ ಹೇಳಿದರು.
ಲೋಕಸಭಾ ಚುನಾವಣೆ ಸಮಯದಲ್ಲಿ ವಿರೋಧ ಪಕ್ಷಗಳ ಪ್ರಚಾರವು ಸುಳ್ಳಿನಿಂದ ಕೂಡಿತ್ತು ಎಂಬುದನ್ನು ಜನರು ಈಗ ಅರಿತುಕೊಂಡಿದ್ದಾರೆ. ಈಗಾಗಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಬಿಜೆಪಿ ಮೈತ್ರಿಗೆ ಸಕರಾತ್ಮಕವಾಗಿ ಬೆಂಬಲ ನೀಡಲು ನಿರ್ಧರಿಸಿದ್ದಾರೆ. ಅಭಿವೃದ್ಧಿ ರಾಜಕೀಯದ ಬಗ್ಗೆ ಬಿಜೆಪಿ ಮಾತನಾಡುತ್ತಿದ್ದರೂ ವಿರೋಧ ಪಕ್ಷಗಳು ಅಧಿಕಾರಕ್ಕಾಗಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸುತ್ತಿವೆ. ಈಗ ಅವರ ಯಾವುದೇ ಆಟಗಳು ನಡೆಯುವುದಿಲ್ಲ ಎಂದರು.
ಬಿಜೆಪಿ ಅಧ್ಯಕ್ಷರಾಗಲು ನೀವು ಇಚ್ಛಿಸುತ್ತೀರಾ ಎಂದು ಮಾಧ್ಯಮಗಳು ಕೇಳಿದಾಗ, ನಾನು ಈ ಹಿಂದೆ ಬಿಜೆಪಿ ಅಧ್ಯಕ್ಷನಾಗಿದ್ದೆ, ಆಗಾಗಿ ಯಾವುದೇ ಆಸೆ ಇಲ್ಲ ಎಂದು ಗಡ್ಕರಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.