ನವದೆಹಲಿ: ಎಎಪಿ ಶಾಸಕ ಅಮಾನತುಲ್ಲಾ ಖಾನ್ ಅವರ ಪುತ್ರ ನೋಯ್ಡಾದ ಸೆಕ್ಟರ್ 95ರಲ್ಲಿನ ಪೆಟ್ರೋಲ್ ಬಂಕ್‌ವೊಂದರ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.
ಅಮಾನತುಲ್ಲಾ ಖಾನ್ ಅವರ ಪುತ್ರ ಮತ್ತು ಆತನ ಸ್ನೇಹಿತರು ಪೆಟ್ರೋಲ್ ಬಂಕ್‌ನಲ್ಲಿ ಸರತಿ ಸಾಲನ್ನು ಬಿಟ್ಟು ಮುಂದೆ ಹೋಗಲು ಪ್ರಯತ್ನಿಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳು ಪೆಟ್ರೋಲ್ ಬಂಕ್ ಸಿಬ್ಬಂದಿಯೊಂದಿಗೆ ವಾಗ್ವಾದ ನಡೆಸಿದ್ದು, ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಘಟನೆ ಸಂಬಂಧ ಅಮಾನತುಲ್ಲಾ ಖಾನ್ ಅವರ ಪುತ್ರ ಸೇರಿದಂತೆ ಆತನ ಸ್ನೇಹಿತರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ ಎಂದು ನೋಯ್ಡಾ ಪೊಲೀಸರು ತಿಳಿಸಿದ್ದಾರೆ.
ಘಟನೆ ಬೆನ್ನಲ್ಲೇ ಅಮಾನತುಲ್ಲಾ ಖಾನ್ ಅವರು ಪೆಟ್ರೋಲ್ ಬಂಕ್‌ಗೆ ತೆರಳಿ ಅಲ್ಲಿನ ಸಿಬ್ಬಂದಿಗೆ ಬೆದರಿಕೆ ಹಾಕಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.
‘ನನ್ನ ಮಗ ಕಾನೂನು ವಿದ್ಯಾರ್ಥಿಯಾಗಿದ್ದು, ಪರೀಕ್ಷೆಗೆ ಹಾಜರಾಗಲು ಆತ ತೆರಳುತ್ತಿದ್ದ. ಈ ಸಂದರ್ಭದಲ್ಲಿ ಪೆಟ್ರೋಲ್ ಬಂಕ್ ಸಿಬ್ಬಂದಿಯೇ ನನ್ನ ಮಗನೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಆತನ ಮೇಲೆ ಹಲ್ಲೆ ನಡೆಸಿದ್ದಾರೆ’ ಎಂದು ಅಮಾನತುಲ್ಲಾ ಖಾನ್ ‘ಪಿಟಿಐ’ಗೆ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.