ADVERTISEMENT

ಬಸ್ ಚಾಲಕ ಹೆಲ್ಮೆಟ್ ಧರಿಸದ್ದಕ್ಕೆ ಮಾಲೀಕನಿಗೆ ದಂಡ!

ಪಿಟಿಐ
Published 21 ಸೆಪ್ಟೆಂಬರ್ 2019, 9:36 IST
Last Updated 21 ಸೆಪ್ಟೆಂಬರ್ 2019, 9:36 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಬಸ್ ಚಾಲಕರೂ ಹೆಲ್ಮೆಟ್ ಧರಿಸಬೇಕು ಎಂಬ ಕಾನೂನು ಇದೆಯಾ? ಇಲ್ಲ.ಆದರೆ ಚಾಲಕ ಹೆಲ್ಮೆಟ್ ಧರಿಸಿಲ್ಲ ಎಂಬ ಕಾರಣ ನೀಡಿ ಬಸ್‌ ಮಾಲೀಕರೊಬ್ಬರಿಗೆ ₹ 500 ದಂಡ ಕಟ್ಟುವಂತೆ ನೋಟಿಸ್ ನೀಡಲಾಗಿದೆ!

ಚಾಲಕ ಹೆಲ್ಮೆಟ್ ಧರಿಸದಿರುವುದಕ್ಕೆ ದಂಡ ಕಟ್ಟುವಂತೆ ಸಾರಿಗೆ ಇಲಾಖೆಯಿಂದ ನೋಟಿಸ್ ಬಂದಿದೆ ಎಂದು ನೊಯ್ಡಾದ ಬಸ್‌ ಮಾಲೀಕ ನಿರಂಕಾರ್ ಸಿಂಗ್ ಎಂಬುವವರು ಆರೋಪಿಸಿದ್ದು, ಈ ವಿಚಾರವಾಗಿ ಅಗತ್ಯ ಬಿದ್ದಲ್ಲಿ ನ್ಯಾಯಾಲಯದ ಮೊರೆಹೋಗುವುದಾಗಿ ತಿಳಿಸಿದ್ದಾರೆ.

ಸಾರಿಗೆ ಉದ್ಯಮ ನಡೆಸುವ ಸಿಂಗ್ ಒಡೆತನದಲ್ಲಿ ಸುಮಾರು 40–50 ಬಸ್‌ಗಳಿವೆ. ಇವರ ಬಸ್‌ಗಳು ವಿವಿಧ ಶಾಲೆ ಹಾಗೂ ಖಾಸಗಿ ಕಂಪನಿಗಳಿಗೆ ಸೇವೆ ಒದಗಿಸುತ್ತಿವೆ.

‘ಇಂತಹ ಲೋಪ ಸಾರಿಗೆ ಇಲಾಖೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಇಲಾಖೆಯ ಬೇಜವಾಬ್ದಾರಿಯುತ ಕಾರ್ಯ ಪ್ರಶ್ನೆಗಳನ್ನು ಹುಟ್ಟುಹಾಕಿರುವುದಲ್ಲದೆ ದಿನನಿತ್ಯ ನೀಡಲಾಗುವ ನೂರಾರು ನೋಟಿಸ್‌ಗಳ ಸತ್ಯಾಸತ್ಯತೆ ಬಗ್ಗೆ ಅನುಮಾನಪಡುವಂತೆ ಮಾಡಿದೆ’ ಎಂದು ಸಿಂಗ್ ಹೇಳಿದ್ದಾರೆ.

ಈ ಕುರಿತು ಪರಿಶೀಲಿಸಲಾಗುತ್ತಿದೆ. ಲೋಪವಿದ್ದರೆ ಸರಿ ಮಾಡಿಕೊಳ್ಳುತ್ತೇವೆ ಎಂದು ಇಲಾಖೆಯ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದಾರೆ.

‘ನೋಟಿಸ್ ಅನ್ನು ಸಾರಿಗೆ ಇಲಾಖೆ ನೀಡಿದೆ, ನೊಯ್ಡಾ ಟ್ರಾಫಿಕ್ ಪೊಲೀಸರಲ್ಲ’ ಎಂದು ಅಧಿಕಾರಿ ಹೇಳಿದ್ದಾರೆ.

ದಂಡ ವಿಧಿಸಲಾಗಿರುವ ನೋಂದಣಿ ಸಂಖ್ಯೆಯ ಬಸ್‌ಗೆ ಈ ಹಿಂದೆ ಸೀಟ್ ಬೆಲ್ಟ್‌ ಧರಿಸದೇ ಇರುವ ಪ್ರಕರಣದಲ್ಲಿನಾಲ್ಕು ಬಾರಿ ದಂಡ ವಿಧಿಸಲಾಗಿತ್ತು ಎಂದೂ ಅಧಿಕಾರಿ ತಿಳಿಸಿದ್ದಾರೆ. ಬಹುಶಃ ಸೀಟ್‌ ಬೆಲ್ಟ್‌ ಧರಿಸಿದ ಕಾರಣವನ್ನುನೋಟಿಸ್‌ನಲ್ಲಿಉಲ್ಲೇಖಿಸುವ ಬದಲು ತಪ್ಪಾಗಿ ಹೆಲ್ಮೆಟ್ ಧರಿಸದ ಕಾರಣ ನೀಡಿರಬಹುದು ಎನ್ನಲಾಗಿದೆ.

‘ಸೀಟ್ ಬೆಲ್ಟ್‌ ಧರಿಸದ ಪ್ರಕರಣವಾಗಿದ್ದರೆ ಅದನ್ನೇ ನೋಟಿಸ್‌ನಲ್ಲಿಯೂ ನಮೂದಿಸಬೇಕೇ ವಿನಃ ಹೆಲ್ಮೆಟ್ ಧರಿಸಿಲ್ಲವೆಂದು ಉಲ್ಲೇಖಿಸಬಾರದು. ನಮ್ಮ ಕಡೆಯಿಂದ ತಪ್ಪಿದ್ದರೆ ದಂಡ ಕಟ್ಟಲು ಸಿದ್ಧ, ಆದರೆ ಅದು ನಿಜವಾಗಿರಬೇಕು’ ಎಂದುನಿರಂಕಾರ್ ಸಿಂಗ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.