ನೊಯ್ಡಾ: ನಿರ್ಮಾಣ ಹಂತದಲ್ಲಿರುವ ಕಟ್ಟಡದ 14ನೇ ಮಹಡಿಯಿಂದ ಕುಸಿದ ಲಿಫ್ಟ್‌ನಲ್ಲಿದ್ದು ಗಾಯಗೊಂಡಿದ್ದ ಕೊನೆಯ ಕಾರ್ಮಿಕನೂ ಶನಿವಾರ ಮೃತಪಟ್ಟಿದ್ದು, ಇದರಿಂದ ಅವಘಡದಲ್ಲಿ ಸಂಭವಿಸಿದ ಒಟ್ಟು ಸಾವಿನ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಎನ್‌ಬಿಸಿಸಿ 2011ರಲ್ಲಿ ನೊಯ್ಡಾದಲ್ಲಿ ಆರಂಭಿಸಿದ ಅಮ್ರಪಾಲಿ ಡ್ರೀಂ ವ್ಯಾಲಿ ಎಂಬ ಕಟ್ಟಡದ ಕಾಮಗಾರಿಯಲ್ಲಿ ತೊಡಗಿದ್ದ ಕಾರ್ಮಿಕರನ್ನು ಹೊತ್ತ ಲಿಫ್ಟ್ 14ನೇ ಮಹಡಿಯಿಂದ ಕುಸಿದ ಪರಿಣಾಮ ಎಂಟು ಜನ ಮೃತಪಟ್ಟಿದ್ದರು. ಬದುಕುಳಿದ ಒಬ್ಬ ಕಾರ್ಮಿಕ ಎಂಟು ದಿನಗಳಿಂದ ಜೀವನ್ಮರಣದ ನಡುವೆ ಹೋರಾಟ ನಡೆಸಿದ್ದರು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ಶನಿವಾರ ಮೃತಪಟ್ಟಿದ್ದಾರೆ.
ಲಿಫ್ಟ್ ಅಪಘಾತ ಸಂಭವಿಸಿದ ಸ್ಥಳದಲ್ಲೇ ನಾಲ್ವರು ಕಾರ್ಮಿಕರು ಮೃತಪಟ್ಟಿದ್ದರು. ನಾಲ್ಕು ಕಾರ್ಮಿಕರನ್ನು ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಗಿತ್ತು. ಮರುದಿನ ಚಿಕಿತ್ಸೆಗೆ ಸ್ಪಂದಿಸದೇ ಅವರು ಮೃತಪಟ್ಟರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮೀರತ್ ಜಿಲ್ಲೆಯ ಮೊಹಮ್ಮದ್ ಕೈಫ್ (20) ಎಂಬ ಯುವಕ ಶನಿವಾರ ಕೊನೆಯುಸಿರೆಳೆದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಮೃತದೇಹವನ್ನು ಕುಟುಂಬದವರಿಗೆ ಹಸ್ತಾಂತರಿಸಲಾಗಿದೆ. ಕಾನೂನು ಕ್ರಮ ಪ್ರಗತಿಯಲ್ಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಿಫ್ಟ್ ದುರಂತ ಕುರಿತಂತೆ ಬಿಸ್ರಾಖ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗಿರ್ಧರಿ ಕನ್‌ಸ್ಟ್ರಕ್ಷನ್ ಕಂಪನಿಯ ನಾಲ್ವರು ಅಧಿಕಾರಿಗಳನ್ನು ಬಂಧಿಸಲಾಗಿದೆ. ಸೆ. 15ರಂದು ಮಳೆ ಇರುವ ಸಂದರ್ಭದಲ್ಲೂ ಲಿಫ್ಟ್ ಅನ್ನು ಅಜಾಗರೂಕತೆಯಿಂದ ಬಳಸಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ವ್ಯಕ್ತಿಗಳ ಕುಟುಂಬಗಳಿಗೆ ತಲಾ ₹25 ಲಕ್ಷ ಪರಿಹಾರ ನೀಡುವಂತೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಮನೀಶ್ ವರ್ಮಾ ಆದೇಶಿಸಿದ್ದಾರೆ. ಸ್ಥಳೀಯ ಗ್ರೇಟರ್ ನೊಯ್ಡಾ ಪ್ರಾಧಿಕಾರ, ಗೌತಮ್ ಬುದ್ಧ ನಗರ ಆಡಳಿತ ಹಾಗೂ ಎನ್‌ಬಿಸಿಸಿ ಪ್ರತ್ಯೇಕ ತನಿಖೆ ಕೈಗೊಂಡಿವೆ ಎಂದು ವರದಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.