ADVERTISEMENT

UPSC Results: ಕಾರ್ಪೋರೇಟ್‌ ಕೆಲಸ ಬಿಟ್ಟ ವಾರ್ದಾ ಖಾನ್‌ಗೆ 18ನೇ ರ್‍ಯಾಂಕ್‌

ಜಾಗತಿಕವಾಗಿ ದೇಶದ ಗೌರವ ಇನ್ನಷ್ಟು ಹೆಚ್ಚಿಸಲು ಐಎಫ್‌ಎಸ್‌ ಮೊದಲ ಆಯ್ಕೆ

ಪಿಟಿಐ
Published 17 ಏಪ್ರಿಲ್ 2024, 13:09 IST
Last Updated 17 ಏಪ್ರಿಲ್ 2024, 13:09 IST
ಯುಪಿಎಸ್‌ಸಿ
ಯುಪಿಎಸ್‌ಸಿ   

ನೋಯ್ಡಾ: ನಾಗರಿಕ ಸೇವಾ ಪರೀಕ್ಷೆಗಳಿಗೆ ತಯಾರಿ ನಡೆಸಲು ಕಾರ್ಪೊರೇಟ್‌ ಕೆಲಸವನ್ನು ತೊರೆದ ನೋಯ್ಡಾ ನಿವಾಸಿ ವಾರ್ದಾ ಖಾನ್‌ (24) ಅವರು ಯುಪಿಎಸ್‌ಸಿ ನಡೆಸಿದ 2023ನೇ ಸಾಲಿನ ಪರೀಕ್ಷೆಯಲ್ಲಿ 18ನೇ ರ್‍ಯಾಂಕ್‌ಗಳಿಸಿ ಗಮನ ಸೆಳೆದಿದ್ದಾರೆ.

ಜಾಗತಿಕ ವೇದಿಕೆಗಳಲ್ಲಿ ಭಾರತದ ಗೌರವವನ್ನು ಇನ್ನಷ್ಟು ಹೆಚ್ಚಿಸಲು ಭಾರತೀಯ ವಿದೇಶಾಂಗ ಸೇವೆ (ಐಎಫ್‌ಎಸ್‌) ತನ್ನ ಮೊದಲ ಆದ್ಯತೆ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

‘ಅಗ್ರ 20ರೊಳಗೆ ನನ್ನ ಹೆಸರು ಬರುತ್ತದೆ ಎಂದು ಊಹಿಸಿರಲಿಲ್ಲ. ಇದು ಕನಸಿನಂತೆ ಭಾಸವಾಗುತ್ತಿದೆ. ಈ ಫಲಿತಾಂಶದಿಂದ ನನ್ನ ಕುಟುಂಬದ ಪ್ರತಿಯೊಬ್ಬರು ಸಂತಸದಲ್ಲಿದ್ದಾರೆ’ ಎಂದು ಖಾನ್‌ ಹೇಳಿದ್ದಾರೆ. 

ADVERTISEMENT

ನೋಯ್ಡಾದ ಸೆಕ್ಟರ್‌ 82ರಲ್ಲಿರುವ ವಿವೇಕ್‌ ವಿಹಾರ್‌ನ ನಿವಾಸಿಯಾಗಿರುವ ಖಾನ್‌ ಅವರು, ದೆಹಲಿ ವಿಶ್ವವಿದ್ಯಾಲಯದ ಖಾಲ್ಸಾ ಕಾಲೇಜಿನಿಂದ ಬಿ.ಕಾಂ (ಆನರ್ಸ್‌) ಪದವಿ ಪಡೆದಿದ್ದಾರೆ. ಅವರ ತಂದೆ ಒಂಬತ್ತು ವರ್ಷಗಳ ಹಿಂದೆ ನಿಧನರಾಗಿದ್ದು, ತಾಯಿಯೊಂದಿಗೆ ವಾಸವಿದ್ದಾರೆ. 

‘ನಾನು ಎಂಟು ತಿಂಗಳು ಕಾರ್ಪೊರೇಟ್‌ ಸಂಸ್ಥೆಯಲ್ಲಿ ಕೆಲಸ ಮಾಡಿದ್ದೇನೆ. ಅದು ನನಗೆ ತೃಪ್ತಿ ನೀಡಲಿಲ್ಲ. ಸಮಾಜ ಮತ್ತು ದೇಶಕ್ಕಾಗಿ ಕೆಲಸ ಮಾಡುವ ತುಡಿತ ನನ್ನನ್ನು ನಾಗರಿಕ ಸೇವಾ ಪರೀಕ್ಷೆಗಳನ್ನು ಬರೆಯುವಂತೆ ಮಾಡಿತು’ ಎಂದು ಅವರು ತಿಳಿಸಿದ್ದಾರೆ.

ಕೆಲಸಕ್ಕೆ ರಾಜೀನಾಮೆ ನೀಡಿ, ಮನೆಯಲ್ಲಿಯೇ ಕುಳಿತು ಪರೀಕ್ಷೆಗೆ ತಯಾರಿ ನಡೆಸಿದೆ. ಒಂದು ವರ್ಷ ಖಾಸಗಿ ಸಂಸ್ಥೆಯಿಂದ ಆನ್‌ಲೈನ್‌ ಕೋಚಿಂಗ್‌ ಅನ್ನೂ ಪಡೆದೆ ಎಂದು ಅವರು ವಿವರಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.