ನವದೆಹಲಿ: ನಾಮನಿರ್ದೇಶಿತ ರಾಜ್ಯಸಭಾ ಸದಸ್ಯ ಸತ್ನಾಮ್ ಸಿಂಗ್ ಸಂಧು ಅವರು ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ಇದರಿಂದ ರಾಜ್ಯಸಭೆಯಲ್ಲಿ ಬಿಜೆಪಿ ಸಂಸದರ ಬಲ 87ಕ್ಕೆ ಏರಿಕೆಯಾಗಿದೆ.
ನಾಮನಿರ್ದೇಶಿತ ಸಂಸದರಾಗಿ ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳ ಒಳಗಾಗಿ ಯಾವುದಾದರೂ ಪಕ್ಷಕ್ಕೆ ಸೇರ್ಪಡೆಗೊಳ್ಳಲಿದ್ದಾರೆಯೇ ಎಂಬುದನ್ನು ಸಂಸತ್ತಿಗೆ ತಿಳಿಸಬೇಕಿತ್ತು. ಜುಲೈ 31ಕ್ಕೆ ಅವರ ಗಡುವು ಮುಗಿಯಲಿದ್ದು, ಅದಕ್ಕೂ ಮುಂಚಿತವಾಗಿಯೇ ಸಂಧು ತಮ್ಮ ನಿರ್ಧಾರ ಪ್ರಕಟಿಸಿದ್ದಾರೆ.
ಚಂಡೀಗಡ ಖಾಸಗಿ ವಿಶ್ವವಿದ್ಯಾಲಯದ ಕುಲಪತಿಯಾಗಿರುವ ಸಂಧು ತಮ್ಮ ನಿರ್ಧಾರವನ್ನು ಜುಲೈ 22ರಂದು ರಾಜ್ಯಸಭಾ ಕಾರ್ಯಾಲಯಕ್ಕೆ ತಿಳಿಸಿದ್ದಾರೆ.
‘2024ರ ಜನವರಿ 31ರಂದು ಪ್ರಮಾಣವಚನ ಸ್ವೀಕರಿಸಿದ್ದ ಸಂಧು ಆರು ತಿಂಗಳ ಗಡುವು ಮುಗಿಯುವ ಮುನ್ನವೇ ಬಿಜೆಪಿ ಸೇರ್ಪಡೆಯಾಗುವುದಾಗಿ ತಿಳಿಸಿದ್ದಾರೆ. ಆದ್ದರಿಂದ ಸಂವಿಧಾನದ 10 ಶೆಡ್ಯೂಲ್‌ನ ವಿವರಣೆ (ಬಿ) ಪ್ಯಾರಾಗ್ರಾಫ್ 2(1)ರ ಪ್ರಕಾರ, ಅವರನ್ನು ಬಿಜೆಪಿ ಸದಸ್ಯ ಎಂದು ಪರಿಗಣಿಸಲಾಗುತ್ತದೆ’ ಎಂದು ರಾಜ್ಯಸಭೆಯು ಕಳೆದ ವಾರ ಪ್ರಕಟಿಸಿದೆ.
ಸಂವಿಧಾನದ 10ನೇ ಶೆಡ್ಯೂಲ್ ಪ್ರಕಾರ, ನಾಮನಿರ್ದೇಶಿತ ಸದಸ್ಯರಾಗುವ ವೇಳೆಯೇ ಯಾವುದಾದರೂ ಪಕ್ಷದ ಸದಸ್ಯರಾಗಿದ್ದರೆ, ಅವರನ್ನು ಅದೇ ಪಕ್ಷದ ಸದಸ್ಯರು ಎಂದು ಪರಿಗಣಿಸಲಾಗುತ್ತದೆ. ಇಲ್ಲದಿದ್ದರೆ, ಪ್ರಮಾಣವಚನ ಸ್ವೀಕರಿಸಿದ ಆರು ತಿಂಗಳ ಒಳಗಾಗಿ ಯಾವುದಾದರೂ ಪಕ್ಷಕ್ಕೆ ಸೇರ್ಪಡೆಗೊಂಡರೆ, ಆ ಪಕ್ಷದ ಸದಸ್ಯರು ಎಂದು ಮಾನ್ಯ ಮಾಡಲಾಗುತ್ತದೆ. ಆರು ತಿಂಗಳ ನಂತರ, ಯಾವುದಾದರೂ ಪಕ್ಷಕ್ಕೆ ಸೇರ್ಪಡೆಗೊಂಡರೆ, ತಮ್ಮ ಸದಸ್ಯತ್ವದಿಂದಲೇ ಅನರ್ಹಗೊಳ್ಳುತ್ತಾರೆ.
8 ಮಂದಿ ನಾಮನಿರ್ದೇಶಿತ ಸಂಸದರ ಪೈಕಿ, ಸತ್ನಾಮ್ ಸಿಂಗು ಸಂಧು ಹಾಗೂ ಜಮ್ಮು ಮತ್ತು ಕಾಶ್ಮೀರದ ಗುಲಾಂ ಅಲಿ ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾಗಿದ್ದಾರೆ. ಉಳಿದಂತೆ ನ್ಯಾಯಮೂರ್ತಿ ರಂಜನ್ ಗೊಗೋಯಿ, ಡಿ. ವಿರೇಂದ್ರ ಹೆಗ್ಗಡೆ, ಇಳಯರಾಜ, ಸುಧಾಮೂರ್ತಿ, ವಿಜಯೇಂದ್ರ ಪ್ರಸಾದ್ ಹಾಗೂ ಪಿ.ಟಿ. ಉಷಾ ಕೂಡ ನಾಮನಿರ್ದೇಶಿತ ಸಂಸದರಾಗಿದ್ದರೂ, ಯಾವುದೇ ಪಕ್ಷಕ್ಕೆ ಸೇರ್ಪಡೆಯಾಗಿಲ್ಲ. ಆದರೂ, ಕೇಂದ್ರ ಸರ್ಕಾರವನ್ನು ಬೆಂಬಲಿಸುತ್ತಿದ್ದಾರೆ.
ನಾಮನಿರ್ದೇಶಿತರಾದ 12 ಸಂಸದರ ಪೈಕಿ, ನಾಲ್ಕು ಸಂಸದರ ನಿವೃತ್ತಿಯ ಬಳಿಕ ಆ ಸ್ಥಾನಗಳು ಖಾಲಿ ಉಳಿದಿವೆ. ಇದರಲ್ಲಿ ಬಿಜೆಪಿ ಜೊತೆಗೆ ಅಧಿಕೃತವಾಗಿ ಗುರುತಿಸಿಕೊಂಡಿದ್ದ ರಾಕೇಶ್ ಸಿನ್ಹಾ, ಸೋನಾಲ್ ಮಾನ್‌ಸಿಂಗ್ ಕೂಡ ಸೇರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.