ನವದೆಹಲಿ: ಯಮುನಾ ನದಿ ನೀರಿನ ಪ್ರಮಾಣ ಅಪಾಯದ ಮಟ್ಟ ಮೀರಿರುವ ಹಿನ್ನೆಲೆಯಲ್ಲಿ ಸರ್ಕಾರೇತರ ಕಚೇರಿಗಳು, ಶಾಲಾ–ಕಾಲೇಜುಗಳಿಗೆ ಭಾನುವಾರದವರೆಗೆ ರಜೆ ಘೋಷಿಸಲಾಗಿದೆ. ಈ ಕುರಿತು ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
ನಗರದಾದ್ಯಂತ ಖಾಸಗಿ ಸಂಸ್ಥೆಯ ನೌಕರರು ಮನೆಯಿಂದಲೇ ಕೆಲಸ ಮಾಡಲು ನಿರ್ದೇಶಿಸಲಾಗಿದೆ ಎಂದು ಅವರು ಹೇಳಿದರು.
ಗುರುವಾರ ಲೆಫ್ಟಿನೆಂಟ್ ಗವರ್ನರ್ ಕಾರ್ಯಾಲಯದಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ (ಡಿಡಿಎಂಎ) ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ‘ಕಾಶ್ಮೀರಿ ಗೇಟ್ ಸುತ್ತಮುತ್ತಲಿನ ವಾಣಿಜ್ಯ ಕಟ್ಟಡಗಳನ್ನು ಭಾನುವಾರದವರೆಗೆ ಮುಚ್ಚಲು ತಿಳಿಸಲಾಗಿದೆ. ಅಂತರ-ರಾಜ್ಯ ಬಸ್ ನಿಲ್ದಾಣಕ್ಕೆ (ಐಎಸ್‌ಬಿಟಿ) ಬರುವ ಬಸ್‌ಗಳು ಸಿಂಗು ಗಡಿಯಲ್ಲೇ ನಿಲ್ಲಲಿವೆ. ಅಲ್ಲಿಂದ ಜನರನ್ನು ದೆಹಲಿ ಸಾರಿಗೆ ನಿಗಮ ಬಸ್‌ಗಳು ಕರೆದೊಯ್ಯುತ್ತವೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರವಾಹದಿಂದಾಗಿ ಮುಖ್ಯಮಂತ್ರಿ ಕಚೇರಿಯ ಕಾರ್ಯಾಲಯ ಸೇರಿದಂತೆ ದೆಹಲಿಯ ಹಲವಾರು ಪ್ರಮುಖ ಪ್ರದೇಶಗಳು ಜಲಾವೃತಗೊಂಡಿದ್ದು, ಜನ ಜೀವನ ಮತ್ತು ಸಂಚಾರವು ಅಸ್ತವ್ಯಸ್ತಗೊಂಡಿದೆ. ಜನರಿಗೆ ರಕ್ಷಣೆ ಮತ್ತು ಪರಿಹಾರವನ್ನು ಒದಗಿಸಲು ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.