ಮುಂಬೈ: ಬಿಜೆಪಿಗೆಪಕ್ಷೇತರ ಶಾಸಕರ ಬೆಂಬಲ ಪಡೆಯುವ ಹೊಣೆಯನ್ನು ಯುವಸ್ವಾಭಿಮಾನಿ ಪಕ್ಷದ ಸ್ಥಾಪಕ ರವಿ ರಾಣಾ ಅವರಿಗೆ ವಹಿಸಲಾಗಿದೆ.
ಪಕ್ಷೇತರರು ಈಗ ಬಿಜೆಪಿ ಮತ್ತು ಶಿವಸೇನಾ ಪಾಳಯಗಳಲ್ಲಿ ಹಂಚಿ ಹೋಗಿದ್ದಾರೆ. ಇವರಲ್ಲಿ ಹೆಚ್ಚಿನವರು ಎಲ್ಲಿ ಅಧಿಕಾರ ಇದೆಯೋ ಆಕಡೆಗೆ ವಾಲುವ ಸಾಧ್ಯತೆ ಹೆಚ್ಚು ಎಂದು ಹೇಳಲಾಗುತ್ತಿದೆ.
34 ವರ್ಷದ ರವಿ ಅವರು ಬದನೇರಾ ಕ್ಷೇತ್ರದಿಂದ ಮೂರನೇ ಬಾರಿಗೆ ಆಯ್ಕೆಯಾಗಿರುವ ಶಾಸಕ. ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಜತೆಗೆ ಅವರು ನೇರ ಸಂಪರ್ಕದಲ್ಲಿದ್ದಾರೆ.
ಪಕ್ಷೇತರ ಶಾಸಕರೆಲ್ಲರೂ ಬಿಜೆಪಿಯ ಪರವಾಗಿದ್ದಾರೆ ಎಂದು ರವಿ ಹೇಳಿದ್ದಾರೆ.ರವಿ ಅವರಿಗೆ ಎಲ್ಲ ಪಕ್ಷಗಳಲ್ಲಿಯೂ ಗೆಳೆಯರಿದ್ದಾರೆ. ಅವರ ಹೆಂಡತಿ, ಸಿನಿಮಾ ನಟಿ ನವನೀತ್ ಕೌರ್ ರಾಣಾ ಅವರು ಅಮರಾವತಿಯ ಪಕ್ಷೇತರ ಸಂಸದೆ. ಲೋಕಸಭಾ ಚುನಾವಣೆಯಲ್ಲಿ ಎನ್‌ಸಿಪಿ–ಕಾಂಗ್ರೆಸ್ ಮೈತ್ರಿಕೂಟವು ನವನೀತ್ ಅವರನ್ನು ಬೆಂಬಲಿಸಿತ್ತು.
ಮಹಾರಾಷ್ಟ್ರದಲ್ಲಿ ಈಗ ಒಳ್ಳೆಯ ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಇದ್ದಾರೆ. ಅವರಿಗೆ 175ಕ್ಕೂ ಹೆಚ್ಚು ಶಾಸಕರ ಬೆಂಬಲವಿದೆ ಎಂದು ರಾಣಾ ಹೇಳಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.