ADVERTISEMENT

ನೂರಾನಿ ಇನ್ನು ನೆನಪು ಮಾತ್ರ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2024, 20:22 IST
Last Updated 29 ಆಗಸ್ಟ್ 2024, 20:22 IST
<div class="paragraphs"><p>ಅಬ್ದುಲ್ ಗಫೂರ್ ಮಜೀದ್ ನೂರಾನಿ</p></div>

ಅಬ್ದುಲ್ ಗಫೂರ್ ಮಜೀದ್ ನೂರಾನಿ

   

ಬೆಂಗಳೂರು: ದೇಶದ ಹಿರಿಯ ವಕೀಲ, ಸಂವಿಧಾನ ತಜ್ಞ ಹಾಗೂ ರಾಜಕೀಯ ವಿಶ್ಲೇಷಕ ಅಬ್ದುಲ್ ಗಫೂರ್ ಮಜೀದ್ ನೂರಾನಿ (93) ಮುಂಬೈನಲ್ಲಿ ಗುರುವಾರ ನಿಧನರಾದರು.

ಲೇಖಕರಾಗಿಯೂ ಎ.ಜಿ. ನೂರಾನಿ ಎಂದೇ ಹೆಚ್ಚು ಪರಿಚಿತರಾಗಿದ್ದ ಅವರು ಪ್ರಜಾಪ್ರಭುತ್ವ, ಸಾಂವಿಧಾನಿಕ ಮೌಲ್ಯಗಳು ಮತ್ತು ಮಾನವ ಹಕ್ಕುಗಳ ದೊಡ್ಡ ಪ್ರತಿಪಾದಕರಾಗಿದ್ದರು. ಕಾನೂನು ವಿಷಯದಲ್ಲಿ ಅಗಾಧ ಪಾಂಡಿತ್ಯ ಹೊಂದಿದ್ದರು.

ADVERTISEMENT

ಮುಂಬೈನಲ್ಲಿ 1930ರಲ್ಲಿ ಜನಿಸಿದ ನೂರಾನಿ ಅವರು ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡಿ, ಮುಂಬೈನ ಸರ್ಕಾರಿ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪಡೆದಿದ್ದರು. ಬಾಂಬೆ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ನಲ್ಲಿ ವಕೀಲರಾಗಿದ್ದರು. ಕಾಶ್ಮೀರದ ಶೇಖ್ ಅಬ್ದುಲ್ಲಾ ಅವರ ದೀರ್ಘಾವಧಿಯ ಬಂಧನದ ಪ್ರಕರಣದಲ್ಲಿ ವಾದ ಮಂಡಿಸಿದ್ದರು. ತಮಿಳುನಾಡು ಮಾಜಿ ಮುಖ್ಯಮಂತ್ರಿ ಕರುಣಾನಿಧಿ ಅವರ ಪ್ರಮುಖ ರಾಜಕೀಯ ಪ್ರತಿಸ್ಪರ್ಧಿಯಾಗಿದ್ದ ಜೆ.ಜಯಲಲಿತಾ ವಿರುದ್ಧವೂ ಅವರು ಬಾಂಬೆ ಹೈಕೋರ್ಟ್‌ನಲ್ಲಿ ವಾದಿಸಿದ್ದರು.

1960ರ ದಶಕದ ಆರಂಭದಲ್ಲಿ ದೇಶ–ವಿದೇಶಗಳ ಪತ್ರಿಕೆಗಳಿಗೆ ಬರೆಯಲು ಪ್ರಾರಂಭಿಸಿದ್ದ ಅವರು ಇದುವರೆಗೂ ಸಾವಿರಾರು ಲೇಖನಗಳನ್ನು ಬರೆದಿದ್ದಾರೆ. ವಿವಿಧ ಪತ್ರಿಕೆಗಳಿಗೆ ಅಂಕಣಗಳನ್ನು ಬರೆದಿದ್ದಾರೆ.

ಲೇಖಕರಾಗಿಯೂ ಗುರುತಿಸಿಕೊಂಡಿದ್ದ ನೂರಾನಿ ಅವರು ‘ದಿ ಕಾಶ್ಮೀರ್ ಕ್ವೆಶ್ಚನ್’, ‘ಮಿನಿಸ್ಟರ್ ಮಿಸ್‌ ಕಂಡಕ್ಟ್’, ‘ಬ್ರೆಝ್ನೇವ್ಸ್‌ ಪ್ಲ್ಯಾನ್ ಫಾರ್ ಏಷ್ಯನ್ ಸೆಕ್ಯೂರಿಟಿ’, ‘ದಿ ಪ್ರೆಸಿಡೆನ್ಶಿಯಲ್ ಸಿಸ್ಟಮ್’, ‘ದಿ ಟ್ರಯಲ್ ಆಫ್ ಭಗತ್ ಸಿಂಗ್’, ‘ಕಾನ್‌ಸ್ಟಿಟ್ಯೂಶನಲ್ ಕ್ವೆಶ್ಚನ್ಸ್ ಇನ್ ಇಂಡಿಯಾ’, ‘ದಿ ಆರ್‌ಎಸ್‌ಎಸ್‌ ಅಂಡ್ ಬಿಜೆಪಿ: ಎ ಡಿವಿಶನ್ ಆಫ್ ಲೇಬರ್’ ಮತ್ತು ‘ದಿ ಆರ್‌ಎಸ್‌ಎಸ್‌: ಎ ಮೆನೇಸ್ ಟು ಇಂಡಿಯಾ’, ‘ದಿ ಕಾಶ್ಮೀರ್‌ ಡಿಸ್ಪ್ಯೂಟ್‌’ (1947–2012), ‘ಆರ್ಟಿಕಲ್‌ 370: ಎ ಕಾನ್‌ಸ್ಟಿಟ್ಯೂಶನಲ್ ಹಿಸ್ಟರಿ ಆಫ್‌ ಜಮ್ಮು ಅಂಡ್‌ ಕಾಶ್ಮೀರ್’, ‘ಸಾವರ್ಕರ್‌ ಅಂಡ್‌ ಹಿಂದುತ್ವ: ದಿ ಗಾಡ್ಸ್‌ ಕನೆಕ್ಷನ್‌’ ಸೇರಿದಂತೆ ಹಲವು ಪ್ರಮುಖ ಕೃತಿಗಳನ್ನು ರಚಿಸಿದ್ದಾರೆ.

ಬದ್ರುದ್ದೀನ್ ತೈಯ್ಯಬ್ಜಿ ಮತ್ತು ಡಾ. ಝಾಕಿರ್ ಹುಸೇನ್ ಅವರ ಜೀವನಚರಿತ್ರೆಯನ್ನೂ ನೂರಾನಿ ರಚಿಸಿದ್ದಾರೆ. ಇವರ ಕೃತಿಗಳು ಸ್ವತಂತ್ರ ಭಾರತದಲ್ಲಿ ಪ್ರಕಟಗೊಂಡ ಮಹತ್ವದ ಕೃತಿಗಳ ಸಾಲಿನಲ್ಲಿ ಸೇರಿವೆ. ಅಲ್ಲದೆ, ರಾಜಕೀಯ ಮತ್ತು ಕಾನೂನು ಕುರಿತು ಪರಿಣಾಮಕಾ
ರಿಯಾಗಿ ವಿಚಾರಗಳನ್ನು ಮಂಡಿಸುತ್ತಿದ್ದ ನೂರಾನಿ ಎಲ್ಲ ತಲೆಮಾರಿಗೂ ಮಾದರಿ ಚಿಂತಕರು ಎನಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.