ನವದೆಹಲಿ: ಉತ್ತರ ಹಾಗೂ ಮಧ್ಯ ಭಾರತದ ಹಲವು ಭಾಗಗಳಲ್ಲಿ ಮಂಗಳವಾರ ಬಿಸಿಗಾಳಿಯ ವಾತಾವರಣ ಇತ್ತು. ರಾಜಸ್ಥಾನದ ಚುರು ಹಾಗೂ ಹರಿಯಾಣ ಸಿರ್ಸಾದಲ್ಲಿ ಗರಿಷ್ಠ ಉಷ್ಣಾಂಶ 50 ಡಿಗ್ರಿ ಸೆಲ್ಸಿಯಸ್ ದಾಟಿತ್ತು.
ದೆಹಲಿಯ ಕನಿಷ್ಠ ಮೂರು ಹವಾಮಾನ ಕೇಂದ್ರಗಳಲ್ಲಿ ಗರಿಷ್ಠ ತಾಪಮಾನ 49 ಡಿಗ್ರಿ ಸೆಲ್ಸಿಯಸ್ ಅಥವಾ ಅದಕ್ಕಿಂತ ಹೆಚ್ಚು ತಾಪಾಮಾನ ದಾಖಲಾಗಿದೆ. ದೆಹಲಿಯ ಮಂಗೇಶ್‌ಪುರ ಹಾಗೂ ನರೇಲಾದಲ್ಲಿ 49.9 ಡಿಗ್ರಿ ಸೆಲ್ಸಿಯಸ್, ಜಜಾಫಗಡದಲ್ಲಿ 49.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಇದು ರಾಷ್ಟ್ರ ರಾಜಧಾನಿಯಲ್ಲಿ ಈ ಋತುವಿನಲ್ಲಿ ದಾಖಲಾದ ಗರಿಷ್ಠ ಉಷ್ಣಾಂಶ. ಮೇ 30ರವರೆಗೂ ಬಿಸಿಗಾಳಿ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ರಾಜಸ್ಥಾನದ ಬಾರ್ಮೆರ್, ಜೋಧಪುರ, ಉದಯಪುರ, ಸಿರೊಹಿ, ಜಾಲೋರ್‌ನಲ್ಲಿ ಮಂಗಳವಾರ ಉಷ್ಣಾಂಶ ಇಳಿಕೆಯಾಗಿದೆ. ಅರಬ್ಬಿ ಸಮುದ್ರದಿಂದ ತೇವಾಂಶ ಗಾಳಿಯಿಂದಾಗಿ ಉಷ್ಣಾಂಶ ಇಳಿಕೆಯಾಗಿದೆ.
ತಾಪಮಾನ ಇಳಿಕೆ ಉತ್ತರಕ್ಕೆ ಮತ್ತಷ್ಟು ವಿಸ್ತರಿಸಲಿದ್ದು, ಮೇ 30ರ ಬಳಿಕ ಬಿಸಿ ಗಾಳಿಯು ನಿಯಂತ್ರಣಕ್ಕೆ ಬರಲಿದೆ. ಬಂಗಾಳ ಕೊಲ್ಲಿಯಿಂದ ಬುಧವಾರದಿಂದ ಬೀಸುವ ತೇವಾಂಶಯುಕ್ತ ಗಾಳಿಯಿಂದಾಗಿ ಉತ್ತರ ಪ್ರದೇಶದಲ್ಲಿ ತಾಪಮಾನ ತಗ್ಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.