ನವದೆಹಲಿ: ಲೋಕಸಭೆ ಚುನಾವಣೆಗೆ 10 ಅಭ್ಯರ್ಥಿಗಳ ನೂತನ ಪಟ್ಟಿಯನ್ನು ಕಾಂಗ್ರೆಸ್ ಭಾನುವಾರ ಬಿಡುಗಡೆ ಮಾಡಿದ್ದು, ಈಶಾನ್ಯ ದೆಹಲಿಯಿಂದ ಬಿಜೆಪಿ ಸಂಸದ ಮನೋಜ್ ತಿವಾರಿ ವಿರುದ್ಧ ಕನ್ಹಯ್ಯಾ ಕುಮಾರ್ ಅವರನ್ನು ಕಣಕ್ಕಿಳಿಸಿದೆ.
ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ(ಜೆಎನ್‌ಯು) ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದ ಕನ್ಹಯ್ಯಾ ಕುಮಾರ್, 2019ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿದ್ದರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಹಾರದ ಬೇಗುಸರಾಯ್‌ನಿಂದ ‘ಕಮ್ಯುನಿಸ್ಟ್ ಪಾರ್ಟಿ ಆಫ್ ಇಂಡಿಯಾ’ (ಸಿಪಿಐ) ಪಕ್ಷದಿಂದ ಕಣಕ್ಕಿಳಿದು, ಕೇಂದ್ರ ಸಚಿವರು ಆಗಿರುವ ಬಿಜೆಪಿ ನಾಯಕ ಗಿರಿರಾಜ್ ಸಿಂಗ್ ವಿರುದ್ಧ ಪರಾಭವಗೊಂಡಿದ್ದರು. ನಂತರ 2021ರಲ್ಲಿ ಕನ್ಹಯ್ಯ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.
ಭೋಜ್‌ಪುರಿ ನಟ, ಗಾಯಕ ಮನೋಜ್ ತಿವಾರಿ ಅವರು 2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಮಾಜಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ವಿರುದ್ಧ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2019ರ ಲೋಕಸಭಾ ಚುನಾವಣೆಯಲ್ಲೂ ಗೆಲ್ಲುವ ಮೂಲಕ ಈಶಾನ್ಯ ದೆಹಲಿಯಿಂದ ಎರಡು ಬಾರಿ ಸಂಸದರಾಗಿ ಆಯ್ಕೆಯಾಗಿದ್ದಾರೆ.
ಮುಖ್ಯಮಂತ್ರಿ ಕೇಜ್ರಿವಾಲ್ ಬಂಧನದ ನಂತರ ದೆಹಲಿಯಲ್ಲಿ ಎಎಪಿ ಪರ ಅಲೆಯಿದೆ ಎಂದು ಹೇಳಲಾಗುತ್ತಿದ್ದು, ಎಎಪಿಯ ಮಿತ್ರ ಪಕ್ಷ(ಇಂಡಿಯಾ ಮೈತ್ರಿಕೂಟ) ಕಾಂಗ್ರೆಸ್‌ಗೂ ಇದರ ಲಾಭ ಸಿಗಲಿದೆ ಎನ್ನಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.