ADVERTISEMENT

ಎಎಪಿ ಹೇಳಿಕೆಯಿಂದ ವಿಪಕ್ಷಗಳ ಒಗ್ಗಟ್ಟಿಗೆ ಹಿನ್ನೆಡೆಯಿಲ್ಲ: ಡಿ. ರಾಜಾ

ಪಿಟಿಐ
Published 25 ಜೂನ್ 2023, 21:33 IST
Last Updated 25 ಜೂನ್ 2023, 21:33 IST
ಡಿ. ರಾಜಾ
ಡಿ. ರಾಜಾ    

ಪಟ್ನಾ: ಬಿಹಾರದ ಪಟ್ನಾದಲ್ಲಿ ನಡೆದ ವಿರೋಧ ಪಕ್ಷಗಳ ಸಭೆ ಬಳಿಕ ಕಾಂಗ್ರೆಸ್‌ ಧೋರಣೆ ವಿರುದ್ಧ ಎಎಪಿ ಅಸಮಾಧಾನ ವ್ಯಕ್ತಪಡಿಸಿರುವುದರಿಂದ ವಿಪಕ್ಷಗಳ ಒಗ್ಗಟ್ಟಿಗೆ ಯಾವ ರೀತಿಯ ಹಿನ್ನಡೆಯೂ ಆಗುವುದಿಲ್ಲ ಎಂದು ಸಿಪಿಐ ಪ್ರಧಾನ ಕಾರ್ಯದರ್ಶಿ ಡಿ. ರಾಜಾ ಅವರು ಅಭಿಪ್ರಾಯಪಟ್ಟಿದ್ದಾರೆ.

‘ನಾವೆಲ್ಲರೂ ಸ್ವತಂತ್ರ ರಾಜಕೀಯ ಪಕ್ಷಗಳು. ನಮ್ಮ ನಡುವೆ ಸಣ್ಣ ಮಟ್ಟದ ಭಿನ್ನಾಭಿಪ್ರಾಯ ಸಹಜ. ಅವನ್ನು ನಾವು ಮೀರುತ್ತಿದ್ದೇವೆ ಮತ್ತು ಎಲ್ಲರೂ ಒಗ್ಗೂಡಲು ನಿರ್ಧರಿಸಿದ್ದೇವೆ’ ಎಂದು ರಾಜಾ ಅವರು ಪಿಟಿಐ ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಒಗ್ಗೂಡುವ ನಿಟ್ಟಿನಲ್ಲಿ ಮುಂದೆ ಬಂದಿರುವ ಜಾತ್ಯತೀತ, ಪ್ರಜಾಪ್ರಭುತ್ವವಾದಿ ಪಕ್ಷಗಳು ಯಾವುದೇ ವಿಚಾರವಾಗಿಯಾದರೂ ನಿರ್ಧಾರ ತೆಗೆದುಕೊಳ್ಳುವ ಸಾಮರ್ಥ್ಯ ಹೊಂದಿವೆ ಎಂದಿದ್ದಾರೆ.

ADVERTISEMENT

ಕಾಂಗ್ರೆಸ್‌ ಭಾಗಿಯಾಗಲಿರುವ ವಿಪಕ್ಷಗಳ ಮುಂದಿನ ಸಭೆಯಲ್ಲಿ ಭಾಗವಹಿಸುವುದು ಎಎಪಿಗೆ ಕಷ್ಟವಾಗಲಿದೆ ಎಂದು ಎಎಪಿ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ನನಗೆ ತಿಳಿದಿರುವುದೇನೆಂದರೆ, ಕೇಜ್ರಿವಾಲ್‌ ಅವರು ಸಭೆಯಲ್ಲಿ ಭಾಗಿಯಾಗಿದ್ದರು.  ತಕ್ಷಣ ಹೊರಡಬೇಕಿದ್ದರಿಂದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಅವರು ಭಾಗಿಯಾಗಲಿಲ್ಲ’ ಎಂದಿದ್ದಾರೆ.

ವಿಪಕ್ಷಗಳ ಒಕ್ಕೂಟದ ನಾಯಕತ್ವ ಕುರಿತ ಚರ್ಚೆಯ ಅಗತ್ಯ ಸದ್ಯ ಇಲ್ಲ. ಆದರೆ, 2024ರ ಲೋಕಸಭೆ ಚುನಾವಣೆ ಫಲಿತಾಂಶ ಕುರಿತು ಭಯಗೊಂಡಿರುವ ಬಿಜೆಪಿಯು ಈ ರೀತಿಯ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ ಎಂದು ಆರೋಪಿಸಿದರು.

ಟಿಎಂಸಿ ನಾಯಕಿ ಮಮತಾ ಬ್ಯಾನರ್ಜಿ ಅವರು ಸಭೆಯಲ್ಲಿ ಪಾಲ್ಗೊಂಡಿದ್ದು ಮತ್ತು ಸಭೆ ಬಳಿಕ ಮುಕ್ತವಾಗಿ ಮಾತನಾಡಿದ್ದು ಸಕಾರಾತ್ಮಕ ಸೂಚನೆ ಎಂದರು.

ಶುಕ್ರವಾರ ನಡೆದ ಸಭೆ ಬಳಿಕ ಎಎಪಿ ಒಡಕಿನ ಮಾತುಗಳನ್ನಾಡಿತ್ತು. ಕೇಂದ್ರ ಸರ್ಕಾರದ ಸುಗ್ರೀವಾಜ್ಞೆ ಕುರಿತು ಕಾಂಗ್ರೆಸ್‌ ತನ್ನ ನಿಲುವನ್ನು ಸ್ಪಷ್ಟಪಡಿಸದಿದ್ದರೆ ವಿಪಕ್ಷಗಳ ಮುಂದಿನ ಸಭೆಯಲ್ಲಿ ಭಾಗವಹಿಸುವುದು ಎಎಪಿಗೆ ಕಷ್ಟವಾಗಲಿದೆ ಎಂದು ಪಕ್ಷದ ನಾಯಕರು ಎಚ್ಚರಿಕೆಯ ಸಂದೇಶ ರವಾನಿಸಿದ್ದರು.

2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ವಿರೋಧ ಪಕ್ಷಗಳು ಒಗ್ಗೂಡುವ ನಿಟ್ಟಿನಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಪಟ್ನಾದಲ್ಲಿ ಸಭೆ ಆಯೋಜಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.