ಚಂಡೀಗಡ: ನವಜೋತ್ ಸಿಂಗ್ ಸಿಧು ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ ಬೆನ್ನಲ್ಲೇ ಮಾಜಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಟೀಕಿಸಿದ್ದಾರೆ. 'ಈ ವ್ಯಕ್ತಿಗೆ ಸ್ಥಿರತೆ ಇಲ್ಲ ಅಂತ ನಾನು ಮೊದಲೇ ಹೇಳಿದ್ದೆನಲ್ಲಾ' ಎಂದಿದ್ದಾರೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಮತ್ತು ಸಿಧು ನಡುವಿನ ಹಗ್ಗಜಗ್ಗಾಟ ಮುಂದುವರಿದಿದೆ. ಆಂತರಿಕ ಭಿನ್ನಮತದ ಕಾರಣಗಳಿಂದಾಗಿ ಅಮರಿಂದರ್ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದರು ಹಾಗೂ ಸಿಧುಗೆ ಪಂಜಾಬ್ ರಾಜ್ಯ ಘಟಕದ ಹೊಣೆಗಾರಿಕೆ ನೀಡಲಾಯಿತು. ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಿ, ಮುಂಬರುವ ವಿಧಾನಸಭೆ ಚುನಾವಣೆಗೆ ಪಕ್ಷ ಸಿದ್ಧತೆ ನಡೆಸುವ ಹಂತದಲ್ಲಿ ಮತ್ತೊಂದು ಬೆಳವಣಿಗೆ ನಡೆದಿದೆ.
'ಈ ವ್ಯಕ್ತಿಗೆ ಸ್ಥಿರತೆ ಇಲ್ಲ ಅಂತ ನಾನು ಮೊದಲೇ ಹೇಳಿದ್ದೆನಲ್ಲಾ ಹಾಗೂ ಗಡಿ ರಾಜ್ಯ ಪಂಜಾಬ್‌ಗೆ ತಕ್ಕನಾದ ವ್ಯಕ್ತಿಯಲ್ಲ' ಎಂದು ಅಮರಿಂದರ್ ಅವರು ಟ್ವೀಟಿಸಿದ್ದಾರೆ. ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಇದೇ ಮೊದಲ ಬಾರಿಗೆ ಅವರು ದೆಹಲಿ ಪ್ರವಾಸ ಕೈಗೊಂಡಿದ್ದಾರೆ.
ಅಮರಿಂದರ್ ಅವರು ಪಕ್ಷ ತಮ್ಮನ್ನು ನಡೆಸಿಕೊಂಡ ರೀತಿಯ ಬಗ್ಗೆ ಸಾರ್ವಜನಿಕವಾಗಿಯೇ ಬೇಸರ ವ್ಯಕ್ತಪಡಿಸಿದರು. 'ನನ್ನನ್ನು ಅಪಮಾನಿಸಲಾಗಿದೆ' ಎಂದು ಹೇಳಿಕೊಂಡಿದ್ದರು. ಹಾಗೇ, ಸಿಧು 'ರಾಷ್ಟ್ರ ವಿರೋಧಿ' ಮತ್ತು 'ಅಪಾಯಕಾರಿ' ಎಂದು ಆರೋಪಿಸಿದ್ದರು. ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಸಿಧು ಎದುರು ಬಲಿಷ್ಠ ಅಭ್ಯರ್ಥಿಯನ್ನು ಕಣಕ್ಕಿಳಿಸುವುದಾಗಿಯೂ ಹೇಳಿದ್ದರು.
ಅಮರಿಂದರ್ ಅವರು ಮುಂದಿನ ರಾಜಕೀಯ ನಡೆಯ ಬಗ್ಗೆ ಇನ್ನೂ ಸ್ಪಷ್ಟಪಡಿಸಿಲ್ಲ ಹಾಗೂ ನಿರ್ಧಾರ ತೆಗೆದುಕೊಳ್ಳುವುದಕ್ಕೂ ಮುನ್ನ ಸ್ನೇಹಿತರೊಂದಿಗೆ ಮಾತುಕತೆ ನಡೆಸುವುದಾಗಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.