ನವದೆಹಲಿ (ಪಿಟಿಐ): ಕೆನಡಾದಲ್ಲಿ ಭಾರತದ ರಾಯಭಾರಿಯಾಗಿದ್ದ ಸಂಜಯ್ ವರ್ಮಾ ಅವರು ಅಲ್ಲಿನ ಪ್ರಧಾನಿ ಜಸ್ಟಿನ್ ಟ್ರೂಡೊ ವಿರುದ್ಧ ನೇರ ವಾಗ್ದಾಳಿ ನಡೆಸಿದ್ದು, ಖಾಲಿಸ್ತಾನಿ ಪ್ರತ್ಯೇಕತಾವಾದಿ ಕ್ರಿಮಿನಲ್‌ಗಳ ವಿರುದ್ಧ ಕ್ರಮ ಕೈಗೊಳ್ಳದೆ ಇರುವುದು ಅವರನ್ನು ಪ್ರೋತ್ಸಾಹಿಸುವುದಕ್ಕೆ ಸಮ ಎಂದು ಹೇಳಿದ್ದಾರೆ.
ಭಾರತ ಮತ್ತು ಕೆನಡಾ ರಾಜತಾಂತ್ರಿಕ ಸಂಬಂಧವು ಹದಗೆಟ್ಟ ಪರಿಣಾಮವಾಗಿ, ವರ್ಮಾ ಅವರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ. ರಾಜಕೀಯ ಲಾಭಕ್ಕಾಗಿ ಟ್ರೂಡೊ ಅವರು ಖಾಲಿಸ್ತಾನಿಗಳಿಗೆ ಉತ್ತೇಜನ ನೀಡುವ ಕೆಲಸ ಮಾಡುತ್ತಿದ್ದಾರೆ ಎಂದು ವರ್ಮಾ ಅವರು ಸುದ್ದಿಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಆರೋಪಿಸಿದ್ದಾರೆ.
‘ಉತ್ತೇಜನವನ್ನು ಎರಡು ಬಗೆಗಳಲ್ಲಿ ನೀಡಬಹುದು. ಏನಾದರೂ ಮಾಡುವಂತೆ ಅವರಿಗೆ ಹೇಳುವುದು ಒಂದು ಬಗೆ. ಎರಡನೆಯದು, ಮೌನವಾಗಿ ಇದ್ದುಬಿಡುವುದು. ಕ್ರಿಮಿನಲ್‌ಗಳು, ಭಯೋತ್ಪಾದಕರು, ತೀವ್ರಗಾಮಿಗಳ ವಿರುದ್ಧ ಯಾವುದೇ ಕ್ರಮ ಜರುಗಿಸದೆ ಇದ್ದರೆ, ಅದು ಉತ್ತೇಜನವೇ ಆಗುತ್ತದೆ’ ಎಂದು ವರ್ಮಾ ಹೇಳಿದ್ದಾರೆ.
‘ಅಲ್ಲಿ ಇಂತಹ ಉತ್ತೇಜನ ಬಹಳ ಇದೆ. ಅದು ಮತಬ್ಯಾಂಕ್‌ಗಾಗಿ ಆಗಿರಬಹುದು ಅಥವಾ ಇತರ ರಾಜಕೀಯ ಕಾರಣಗಳಿಗಾಗಿ ಆಗಿರಬಹುದು. ಈ ಉತ್ತೇಜನದ ಕಾರಣದಿಂದಾಗಿ, ಖಾಲಿಸ್ತಾನಿಗಳು ಭಾರತದ ಹಿತಾಸಕ್ತಿಗಳ ಮೇಲೆ ದಾಳಿ ನಡೆಸುತ್ತಾರೆ, ನಮಗೆ ಹಾನಿ ಉಂಟುಮಾಡಲು ಯತ್ನಿಸುತ್ತಾರೆ’ ಎಂದು ಅವರು ಹೇಳಿದ್ದಾರೆ.
ಕೆನಡಾದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು, ತಮ್ಮ ಜನಪ್ರಿಯತೆ ತಗ್ಗುತ್ತಿರುವ ಕಾರಣ ಜನರ ಗಮನವನ್ನು ಬೇರೆಡೆ ಸೆಳೆಯಲು ಟ್ರೂಡೊ ಅವರು ಭಾರತದ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ವರ್ಮಾ, ‘ಕೆನಡಾ ಮಾಧ್ಯಮಗಳಲ್ಲಿ ಪ್ರಕಟವಾಗಿರುವ, ನಾನು ನೋಡಿರುವ ಸಮೀಕ್ಷೆಗಳು ಟ್ರೂಡೊ ಅವರ ಜನಪ್ರಿಯತೆ ಕಡಿಮೆ ಆಗುತ್ತಿದೆ ಎಂದು ಹೇಳಿವೆ’ ಎಂದರು.
ಕೆನಡಾದಲ್ಲಿ ನಡೆಯುತ್ತಿರುವ ಭಾರತ ವಿರೋಧಿ ಕೃತ್ಯಗಳಲ್ಲಿ ಹೆಚ್ಚಿನವು ರಾಜಕೀಯ ಲಾಭದ ಉದ್ದೇಶ ಹೊಂದಿರುವಂಥವು ಎಂದು ವರ್ಮಾ ಹೇಳಿದ್ದಾರೆ. ‘ಕೆನಡಾದವರು ಒಳ್ಳೆಯ ಸ್ನೇಹಿತರು. ಅವರು ಬಹಳ ನಮ್ರವಾಗಿರುತ್ತಾರೆ. ಆದರೆ ಕೆನಡಾದಲ್ಲಿ ಇರುವ ಖಾಲಿಸ್ತಾನಿ ಭಯೋತ್ಪಾದಕರು, ತೀವ್ರವಾದಿಗಳು ಮತ್ತು ಅವರಿಗೆ ರಾಜಕೀಯ ಬೆಂಬಲ ಒದಗಿಸುವವರ ಬಗ್ಗೆ ಇದೇ ಮಾತು ಹೇಳಲು ಆಗುವುದಿಲ್ಲ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.